Kundapra.com ಕುಂದಾಪ್ರ ಡಾಟ್ ಕಾಂ

ಲೇಕ್ 2024 – 14ನೇ ದ್ವೈವಾರ್ಷಿಕ ವಿಚಾರ ಸಂಕಿರಣ ಎರಡನೇ  ದಿನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಲೇಕ್ 2024 – 14ನೇ ದ್ವೈವಾರ್ಷಿಕ  ವಿಚಾರ ಸಂಕಿರಣ ಎರಡನೇ  ದಿನ ಒಟ್ಟು ತಾಂತ್ರಿಕ ಅವಧಿಯಲ್ಲಿ ನಗರ ವಿಭಾಗದ ಆರರಿಂದ ಒಂಬತ್ತನೇ ತರಗತಿಯ  83 ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ವಿಭಾಗದಿಂದ 45 ವಿದ್ಯಾರ್ಥಿಗಳ ಪ್ರಸ್ತುತಿ, 21 ಸಂಶೋಧಕರು ಮತ್ತು ಅಧ್ಯಾಪಕರಿಂದ ಪ್ರಸ್ತುತಿ, ಹತ್ತರಿಂದ ಹನ್ನೆರಡನೇ ತರಗತಿಯ 32 ವಿದ್ಯಾರ್ಥಿಗಳ ಪ್ರಸ್ತುತಿ, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳಿಂದ  ಒಟ್ಟು  38  ಜನರ ವಿಚಾರ ಮಂಡನೆ ಕಾಲೇಜಿನ ವಿವಿಧ ಸಭಾಂಗಣದಲ್ಲಿ ನಡೆಯಿತು. ಜೊತೆಯಲ್ಲಿ, ಎಲ್ಲಾ ವರ್ಗಗಳಲ್ಲಿ  ಒಟ್ಟು  63 ಸಂಶೋಧನಾ ಆಸಕ್ತರು  ಪೋಸ್ಟರ್ ಪ್ರಸ್ತುತಿಯಲ್ಲಿ ಭಾಗಿಯಾದರು.

ಮೈಕ್ರೋ ಪ್ಲಾಸ್ಟಿಕ್ ಕಾರಣ
ಅಂತರರಾಷ್ಟ್ರೀಯ ಸಂಶೋಧನಾ ಪ್ರಸ್ತುತಿಯಲ್ಲಿ ರಷ್ಯಾದ ನಿಕೋಲಾಯ್ ಫಿಲೆಟೊವ್- ಹವಾಮಾನ ತಾಪಮಾನ ಮತ್ತು ಮಾನವಜನ್ಯ ಪರಿಣಾಮಗಳು: ರಷ್ಯಾದ ಕೆರೆಗಳ ಆಧುನಿಕ ಸ್ಥಿತಿ ಮತ್ತು ಬದಲಾವಣೆಗಳಲ್ಲಿ ಪರಿಸರ ಮತ್ತು ಸಾಮಾಜಿಕ, ಆರ್ಥಿಕ ಅಂಶಗಳ ಕುರಿತು ಮಾತನಾಡಿ, ರಷ್ಯಾದ ಪ್ರವಾಸೋದ್ಯಮದಿಂದಾಗಿ ಅಲ್ಲಿನ ಹೆಚ್ಚಿನ ಕೆರೆಗಳು ಮೈಕ್ರೋ ಪ್ಲಾಸ್ಟಿಕ್‌ನಿಂದ ಕಲುಷಿತಗೊಂಡಿದೆ. ಈ ದುಷ್ಪಾರಿಣಾಮ ಭೂಮಿಯ ಇತರ ಜಲಮೂಲಗಳ ಮೇಲು ಪರಿಣಮಿಸಿದೆ ಎಂದರು.

ಒಂದು ಜೋಡಿ ಹಕ್ಕಿಗಳಿಗೆ 90,000 ಹಣ್ಣುಗಳು ಮತ್ತು 17,000 ಕೀಟಗಳು ಆಹಾರವಾಗಿ ಅವಶ್ಯಕತೆ
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗಸ್ತು ಅರಣ್ಯಪಾಲಕ ರಮೇಶ್ ಕೆ. ಬಡಿಗೇರ ಒಂದು ಜೋಡಿ ಮಲಬಾರ್ ಗ್ರೇ ಹಾರ್ನ್ ಬಿಲ್ ಹಕ್ಕಿಗಳ ಕುರಿತ ಅಧ್ಯಯನ ನಡೆಸಿ ತಮ್ಮ ಅನುಭವವನ್ನು ಹಂಚಿಕೊಂಡರು. ಮೂಲತಃ ಪರಿಸರ ಪ್ರೇಮಿಯಾಗಿರುವ ಇವರು, ಕಾಡನ್ನು ಹೆಚ್ಚು ಅನ್ವೇಷಿಸುವುದರಲ್ಲಿ ಪರಿಣತರು. ಈ ಅಧ್ಯಯನಕ್ಕೆ ಒಟ್ಟು 26 ದಿನದ 267 ಗಂಟೆಯನ್ನು ವ್ಯಯಿಸಿದ್ದರು. 

ಪ್ರತಿ ಎರಡು ದಿನದಲ್ಲಿ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಕಾಡಲ್ಲೇ ತಂಗಿದ್ದು, ಹಾರ್ನ್ ಬಿಲ್ ಹಕ್ಕಿಗಳ ವೀಕ್ಷಣೆ ಮತ್ತು ಅದರ ದೈನಂದಿನ ಚಲನವಲನವನ್ನು ತಮ್ಮ ಡೈರಿಯಲ್ಲಿ ದಾಖಲಿಸಿದ್ದರು. ಹಕ್ಕಿಗಳು ಬರುವ ದಿಕ್ಕು, ಕೀಟಗಳನ್ನು ಹಿಡಿದು ತರುವ ರೀತಿ, ಹಿಕ್ಕೆಗಳನ್ನು ಹಾಕುವ ಸಮಯ ಹೀಗೆ ಎಲ್ಲವನ್ನು ಬಹಳ ಸೂಕ್ಷ್ಮತೆಯಿಂದ ನಮೂದಿಸಿಟ್ಟಿದ್ದರು. ಸ್ಟಾಪ್ ವಾಚ್ ಸಹಾಯದಿಂದ ಹಕ್ಕಿಗಳ ಆಹಾರಕ್ರಮದ ಅವಧಿಯನ್ನು ಪಟ್ಟಿ ಮಾಡುವುದರ ಜೊತೆಗೆ  ದುರ್ಬೀನು ಮತ್ತು ಕ್ಯಾಮರಾಗಳ  ಮೂಲಕ 26 ಅಧ್ಯಯನಗಳಲ್ಲಿ ಮಲಬಾರ್ ಗ್ರೇ ಹಾರ್ನ್ ಬಿಲ್ ಹಕ್ಕಿಗಳ ಪ್ರತಿ ಚಲನವಲನವನ್ನು ಸೆರೆ ಹಿಡಿದಿದ್ದರು. 

ಇವರ ಅಧ್ಯಯನದ ಪ್ರಕಾರ, ಒಂದು ವರ್ಷಕ್ಕೆ ಒಂದು ಜೋಡಿ ಹಾರ್ನ್ ಬಿಲ್ ಹಕ್ಕಿಗೆ 90,000 ಹಣ್ಣುಗಳು ಮತ್ತು 17,000 ಕೀಟಗಳು ಆಹಾರವಾಗಿ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಜಗತ್ತಿನ ಎಲ್ಲಾ ಪಕ್ಷಿಗಳ ಆಹಾರ ಸಂಪತ್ತಿನ ಅವಶ್ಯಕತೆಯನ್ನು ಸಭಿಕರಲ್ಲಿ ಅಂದಾಜಿಸಲು ತಿಳಿಸಿದರು. ಅರಣ್ಯ ಇವೆಲ್ಲವನ್ನೂ ಒದಗಿಸುವ ಶಕ್ತಿಯನ್ನು ಹೊಂದಿದೆ. ಅರಣ್ಯ ನಿಜವಾದ ಅಕ್ಷಯ ಪಾತ್ರೆ. ಅರಣ್ಯ ನಿಜವಾದ ಪ್ರಯೋಗಾಲಯ ಹಾಗೂ ವಿಶ್ವವಿದ್ಯಾಲಯ ಎಂದು ಬಣ್ಣಿಸಿದರು.

ವೇದಿಕೆಯಲ್ಲಿ ಬಂದು ವಿಷಯ ಮಂಡನೆ ಮಾಡಲು ಅವಕಾಶ ನೀಡಿದ  ಅರಣ್ಯ ಇಲಾಖೆಯನ್ನು ಸ್ಮರಿಸಿದರು. ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version