ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ವಿಜ್ಞಾನಿ ಇದ್ದಲ್ಲಿ ಜ್ಞಾನ, ಜ್ಞಾನ ಇದ್ದಲ್ಲಿ ಕಲೆ ಇರುತ್ತದೆ. ಅಂತೆಯೇ, ಕಲೆ ಇದ್ದಲ್ಲಿ ಪರಿಸರ ರಕ್ಷಣೆ ಮತ್ತು ಕಾಳಜಿಯೂ ಇರುತ್ತದೆ ಎಂದು ಮೂಡುಬಿದಿರೆಯ ಶ್ರೀ ಜೈನಮಠದ ಡಾ. ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯಮಹಾಸ್ವಾಮೀಜಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎನರ್ಜಿ ಮತ್ತು ವೆಟ್ ಲಾಂಡ್ಸ್ ರಿಸರ್ಚ್ ಗ್ರೂಪ್ ಇವುಗಳ ಆಶ್ರಯದಲ್ಲಿ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ 4ದಿನಗಳ ಲೇಕ್ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತದಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಕಾರಣವನ್ನು ಅರ್ಥೈಸಿಕೊಳ್ಳುವುದು ಬಹಳ ಅಗತ್ಯವಿದೆ. ಮನುಷ್ಯನ ಅನೇಕ ಪರಿಸರ ವಿರೋಧಿ ಚಟುವಟಿಕೆಗಳಿಂದ ನೆಲ, ಜಲ ವಾತಾವರಣ, ಪಶು ಪಕ್ಷಿಗಳಿಗೆ ಉತ್ತಮ ವಾತಾವರಣವನ್ನು ರೂಪಿಸಿಕೊಡುವಲ್ಲಿ ಹಾನಿಯುಂಟಾಗುತ್ತಿವೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವರ ಪರಿಸರ ಕಾಳಜಿಯನ್ನು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಚಾನ್ಸಲರ್ ಫಾದರ್ ಮೆಲ್ವಿನ್ ಡಿ. ಕುನ್ಹಾ ಮಾತನಾಡಿ, ಒಂದಲ್ಲ ಒಂದು ರೀತಿಯಲ್ಲಿ ಮಾನವ ಮತ್ತು ಪ್ರಕೃತಿ ಪರಸ್ಪರ ಸಂಪರ್ಕವನ್ನು ಹೊಂದಿದೆ. ಪ್ರಕೃತಿಯ ನಿಜ ಸೌಂದರ್ಯವನ್ನು ಕಣ್ಣಾರೆ ಅನುಭವಿಸಬೇಕು ಮತ್ತು ಮುಂದಿನ ಪೀಳಿಗೆ ಸುರಕ್ಷಿತ ಜೀವನ ನಡೆಸಲು ನಾವು ಪರಿಸರವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ , ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು. ಇಂತಹ ಕೆರೆ ಸಮ್ಮೇಳನಗಳು ಕೆರೆಯನ್ನು ಪುನಸ್ಚೇತನಗೊಳಿಸುವ ಹಾಗೂ ರಕ್ಷಣೆಯನ್ನು ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು. ಮಾತಿಗಿಂತ ಕಾರ್ಯ ದೊಡ್ಡ ಬದಲಾವಣೆ ತರಬಲ್ಲದು ಎಂಬುದನ್ನು ರಮೇಶ್ ಬಡಿಗೇರ, ಗಾಯತ್ರಿ ಮತ್ತು ಶ್ರೀಕಾಂತ್ ನಾಯ್ಕ್ ರಂತಹ ಲೇಕ್ ಸಮ್ಮೇಳನದಲ್ಲಿ ಪಾಲ್ಗೊಂಡ ಪರಿಸರ ಸಂರಕ್ಷಕ ಸಾಧಕರ ಜೀವನವನ್ನು ಪಾಠವಾಗಿ ಬಳಸಿಕೊಳ್ಳಬೇಕು ಎಂದರು.
ಈ ಸ್ಪರ್ಧೆಗಳಲ್ಲಿ ಸುಮಾರು 524 ಶಾಲಾ ವಿದ್ಯಾರ್ಥಿಗಳು, 82 ಕಾಲೇಜು ವಿದ್ಯಾರ್ಥಿಗಳು, 25 ಸಂಶೋಧಕರು ಮತ್ತು 6 ಅಧ್ಯಾಪಕರು ಭಾಗವಹಿಸಿದ್ದರು. ಕ್ಷೇತ್ರ ದತ್ತಾಂಶ ಸಂಗ್ರಹಣೆ, ವ್ಯಾಖ್ಯಾನ ಮತ್ತು ದತ್ತಾಂಶ ಮತ್ತು ಪ್ರಸ್ತುತಿಯ ಸಂಶ್ಲೇ?ಣೆಯೊಂದಿಗೆ ತಮ್ಮ ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸಹ್ಯಾದ್ರಿ ಯುವ ಪರಿಸರಶಾಸ್ತ್ರಜ್ಞರನ್ನು (ಶಾಲಾ ಮತ್ತು ಕಾಲೇಜು ವಿಭಾಗ) ಪುರಸ್ಕರಿಸಲಾಯಿತು .
ಕಾರ್ಯಕ್ರಮದಲ್ಲಿ ಐಐಎಸ್‌ಸಿ ಟಿ. ವಿ. ರಾಮಚಂದ್ರ ಅವರು ಲೇಕ್ 2024ರ ಗ್ರಾಮೀಣ ಮತ್ತು ನಗರ ವಲಯಗಳಿಗೆ ಶಿಫಾರಸ್ಸು ಮಾಡಿದರು.
1. ಜೀವವೈವಿಧ್ಯ ಕಾಯ್ದೆ-2002 ಜಾರಿಯಾಗಿ 22 ವರ್ಷಗಳು ಕಳೆದರೂ ಬಹುತೇಕ ಗ್ರಾಮ ಪಂಚಾಯತಿಗಳ ಜೀವವೈವಿಧ್ಯ ನಿರ್ವಹಣೆಗಳು ನಿಷ್ಪರಿಣಾಮಕಾರಿಯಾಗಿವೆ. ಭಾರತ ಸರ್ಕಾರದ ಇಂತಹ ಶ್ಲಾಘನೀಯ ಕಾಯ್ದೆಯ ನಿಷ್ಪರಿಣಾಮಕಾರಿತ್ವವನ್ನು ಮುಕ್ತಗೊಳಿಸಲು ಸಮ್ಮೇಳನವು ಸಂಬಂಧಪಟ್ಟ ಜಿಲ್ಲಾ ಪಂಚಾಯತ್ಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯ ಉಸ್ತುವಾರಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
2. ಜೀವವೈವಿಧ್ಯ ಕಾಯ್ದೆ -2002 ಪ್ರಕಾರ, ಸಮ್ಮೇಳನವು ಜೀವವೈವಿಧ್ಯ ದಾಖಲಾತಿಯಲ್ಲಿ ವಿದ್ಯಾರ್ಥಿ ಸಮುದಾಯದ ಸಾಮರ್ಥ್ಯವನ್ನು ಅಂಗೀಕರಿಸುತ್ತದೆ. ಕ್ಷೇತ್ರ ಸಮೀಕ್ಷೆಗಳು ಮತ್ತು ಸಂದರ್ಶನಗಳನ್ನು ಮಾಡುವಲ್ಲಿ ಶೈಕ್ಷಣಿಕ ಜ್ಞಾನದ ಅನ್ವಯಗಳನ್ನು ಒಳಗೊಂಡಿರುತ್ತದೆ. ಅಂತಹ ಯೋಜನೆಗಳಿಗೆ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲಗಳನ್ನು ನೀಡಬೇಕು.
3.ನೀರು ಮಾನವ ನಾಗರೀಕತೆಗಳ ಮುಖ್ಯಬಿಂದು ಮತ್ತು ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪಕ್ಕೆ ನೀರಿನ ಗೋಪುರವಾಗಿ ಕಾರ್ಯನಿರ್ವಹಿಸುವುದರಿಂದ ಅದರ ನಿರ್ವಹಣೆಯು ಒಂದು ನಿರ್ಣಾಯಕ ವಿಷಯವಾಗಿದೆ. ಎಲ್ಲಾ ರೀತಿಯ ಜಲಮೂಲಗಳು ಮತ್ತು ಅವುಗಳ ಜಲಾನಯನ ಪ್ರದೇಶಗಳ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳಬೇಕು
4. ಜೌಗು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳ ಶೋಲಾ ಅರಣ್ಯಗಳು, ಮಾನ್ಸೂನ್ ಮಳೆಯ ಸಂಗ್ರಹಣಾ ಪ್ರದೇಶಗಳು ದೀರ್ಘಕಾಲಿಕ ನೀರಿನ ಮೂಲಗಳಾಗಿರುವುದರಿಂದ ಅದನ್ನು ಮ್ಯಾಪ್ ಮಾಡಿ, ಸಂರಕ್ಷಣೆಗೆ ಆದ್ಯತೆ ನೀಡಬೇಕು.
5. ತೀವ್ರವಾದ ನೀರು, ಮಣ್ಣು ಮತ್ತು ವಾಯು ಮಾಲಿನ್ಯದ ಸಮಸ್ಯೆಗಳನ್ನು ಉಂಟುಮಾಡುವ ಹಾನಿಕಾರಕ ರಾಸಾಯನಿಕ ಪದಾರ್ಥಗಳ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಜೈವಿಕ ಕೀಟನಾಶಕಗಳು ಮತ್ತು ಜೈವಿಕ ಗೊಬ್ಬರಗಳ ಬಳಕೆಯನ್ನು ಉತ್ತೇಜಿಸಲು ಶಿಫಾರಸು ಮಾಡಲಾಗಿದೆ.
ಮೇಲಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ, ಕೃಷಿ ವಲಯಕ್ಕೆ ಈ ಕೆಳಗಿನ ಶಿಫಾರಸುಗಳನ್ನು ಮಾಡಿದೆ:
6. ಅಂತರ್ಜಲದ ಕೊರತೆಯನ್ನು ತಗ್ಗಿಸಲು ಸಹಾಯ ಮಾಡುವ ಮಳೆಯ ಒಳನುಸುಳುವಿಕೆಯನ್ನು ಹೆಚ್ಚಿಸಲು ಪ್ರತಿ ಗ್ರಾಮ / ವಾರ್ಡ್‌ನಲ್ಲಿ ಕನಿಷ್ಟ 33% ಸ್ಥಳೀಯ ಅರಣ್ಯವನ್ನು ಕಾಪಾಡುವುದು.
ಕಾರ್ಯಕ್ರಮದಲ್ಲಿ ವಿಜ್ಞಾನಿ ಟಿ.ವಿ. ರಾಮಚಂದ್ರ , ಪರಿಸರ ಹೋರಾಟಗಾರ ಎಂ. ಕುಮಾರಸ್ವಾಮಿ ,ಕುಮಟಾದ ಐಐಎಸ್ ಸಿ ಎಂ. ಡಿ. ಸುಭಾಷ್ ಚಂದ್ರನ್, ಎನ್ವಿರಾನ್ಮೆಂಟಲ್ ಸೈನ್ಸ್ ಕಠ್ಮಂಡು ವಿಶ್ವವಿದ್ಯಾಲಯದ ಡಾ. ಸುಭೋಧ್ ಶರ್ಮ, ಡಾ. ರಾಜಶೇಖರ್, ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ (ಒಂಊಇ) ಯ ಡಾ. ದೀಪಿಕಾ ಶೆಟ್ಟಿ, ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಗಗನ ಲೋಕೇಶ್ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಡಾ. ಎಸ್. ವಿನಯ್ ವಂದಿಸಿದರು.

