Kundapra.com ಕುಂದಾಪ್ರ ಡಾಟ್ ಕಾಂ

ಶ್ರೀಮದ್ ವಾಲ್ಮೀಕಿ ರಾಮಾಯಣ – ಶ್ರವಣಸಪ್ತಾಹ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ:
ಎಲ್ಲಾದರೂ ಇರಿ, ಹೇಗಾದರೂ ಇರಿ. ಭಾರತೀಯತೀಯತೆ ಎತ್ತಿ ಹಿಡಿಯಿರಿ. ಉತ್ತಮ ಜೀವನ ರೂಪಿಸಿಕೊಳ್ಳಲು ಭಾರತವೇ ಶ್ರೇಷ್ಠ ಎಂದು ಶ್ರೀ ಕ್ಷೇತ್ರ ಕಟೀಲಿನ ವಿದ್ವಾನ್ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು .

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಳ್ವಾಸ್ ಕಾಲೇಜು (ಸ್ವಾಯತ್ತ) ಸಂಸ್ಕೃತ ವಿಭಾಗ ಮತ್ತು ಪ್ರಜ್ಞಾ – ಜಿಜ್ಞಾಸಾವೇದಿ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಆರಂಭಗೊಂಡ 7 ದಿನಗಳ  “ಶ್ರೀಮದ್ ವಾಲ್ಮೀಕಿ ರಾಮಾಯಣ – ಶ್ರವಣಸಪ್ತಾಹ ” ಉದ್ಘಾಟಿಸಿ ಅವರು ಮಾತನಾಡಿದರು .

ರಾಮಾಯಣ ಎನ್ನುವುದು  ರಾಮ, ರಾಮಸ್ಯ, ಅಯಣಂ. ಅಂದರೆ ರಾಮ ನಡೆದ ದಾರಿಯಲ್ಲಿ ಸಾಗುವುದು ಎಂದರ್ಥ. ರಾಮಾಯಣ ಎಂಬ  ಪೂಜ್ಯನೀಯ ಕಾವ್ಯವನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಶ್ರೀ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ರಾಮನ ಕಾಲದಲ್ಲಿ ಪ್ರಜಾಪ್ರಭುತ್ವ ಇಲ್ಲದ್ದಿದರೂ ಪ್ರಜೆಗಳು ರಾಮನ ಆದರ್ಶಗಳನ್ನು ಪರಿಪಾಲನೆ ಮಾಡುತ್ತಿದ್ದರು. ಕೇವಲ ರಾಮನ ಹೆಸರನ್ನು ಪೂಜಿಸುವುದಲ್ಲದೆ ರಾಮನ ನಿಜಗುಣ, ಆದರ್ಶಗಳ ಪರಿಪಾಲನೆ ಮಾಡುತ್ತಾ ಜೀವನವನ್ನು ನಡೆಸುವುದು ಅತ್ಯುತ್ತಮ. ಉತ್ತಮವಾದ ಧ್ಯೇಯ ಒಳಗೊಂಡ ರಾಮಾಯಣ ಮಹಾಕಾವ್ಯದ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು  ಎಂದು ನುಡಿದರು .

ರಾಮಾಯಣವು ದೀಕ್ಷಾಬದ್ಧತೆಯ ಜೀವನವನ್ನು ಸಾರುವುದರಿಂದ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ರಾಮನು ಏಕಪತ್ನಿ ವೃತಸ್ಥ. ಆ ಮೂಲಕ ದೀಕ್ಷಾಬದ್ಧತೆಯ ಮಾರ್ಗವನ್ನು ನಿದರ್ಶನವಾಗಿ ಜಗತ್ತಿಗೆ ತೋರಿದ್ದು ಸ್ಮರಣೀಯ. ಬದುಕಿನಲ್ಲಿ ದಾನಶೀಲ ಮನೋಭಾವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು .

ರಾಮ ತಾನು ಉದ್ದಾರವಾಗುವುದರೊಂದಿಗೆ, ವನರಣರನ್ನು ವಾನರರನ್ನಾಗಿಸಿ ಉದ್ಧರಿಸಿದ ಧೀಮಂತ. ಒಂದಲ್ಲ ಒಂದು ರೀತಿಯಲ್ಲಿ ಮಾನವರು ವನರಣರೇ ಆಗಿರುತ್ತಾರೆ. ನಾಗರಿಕ ಜೀವನಕ್ಕೆ ಅರಣ್ಯವೇ ಪ್ರಾಶಸ್ತ್ಯ. ಬದುಕಿನ ಸಂದೇಶವನ್ನು ಸಾರಿ ಹೇಳುವುದೇ ರಾಮಾಯಣ ಎಂದು ತಿಳಿಸಿದರು.

ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯು ಇಂಡಸ್ಟ್ರಿಯ ಮಾಲಕ ಕೆ. ಶ್ರೀಪತಿ ಭಟ್ ಮಾತನಾಡಿ, ಭಾರತೀಯ ಪರಂಪರೆ ಒಂದು ಶ್ರೇಷ್ಠ ಪರಂಪರೆ. ರಾಮಾಯಣ , ಮಹಾಭಾರತ ಮತ್ತು ವೇದ, ಪುರಾಣಗಳ ಸಂದೇಶವನ್ನು ಬದುಕಿನಲ್ಲಿ ಪರಿಪಾಲಿಸುವುದು ಆದ್ಯ ಕರ್ತವ್ಯವಾಗಬೇಕು. ಆಳ್ವಾಸ್ ಸಂಸ್ಥೆ ರಾಮಾಯಣದಂತಹ ಕಾವ್ಯವನ್ನು ಶ್ರವಣ ಸಪ್ತಾಹದ ಮೂಲಕ ತಿಳಿಹೇಳುವ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು . 

ಪ್ರತಿಯೊಬ್ಬ ಪ್ರಜೆಯು ಪ್ರಚಲಿತ ವಿದ್ಯಮಾನ ಅರಿತುಕೊಳ್ಳಬೇಕು. ಮೌಲ್ಯಯುತವಾದ ಜೀವನವನ್ನು ನಡೆಸಲು ಕಲಿಸುವುದೇ ರಾಮಾಯಣದ ತಿರುಳು. ಮುಂದಿನ ದಿನಗಳಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಸಪ್ತಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದು ಆಶಿಸಿದರು. 

ಬಳಿಕ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ಮಂಜುನಾಥ ಭಟ್ಟ ಹೇರೂರು ಆದಿಕವಿ ವಾಲ್ಮೀಕಿ ವಿ?ಯದ ಕುರಿತು ಉಪನ್ಯಾಸ ನೀಡಿ ,ಕವಿ ಮಾಡಿದ್ದು ಕಾವ್ಯವಾಗುತ್ತದೆ. ಆದರೆ, ಕವಿಯಿಂದ ಹೊರಹೊಮ್ಮಿದೆಲ್ಲವೂ ಕಾವ್ಯವಾಗಲು ಸಾಧ್ಯವಿಲ್ಲ. ರಾಮಾಯಣವು ಶ್ರೀ ವಾಲ್ಮೀಕಿ ಬರೆದಿರುವ ಅದ್ಬುತ ಮಹಾಕಾವ್ಯ . ಇದರಲ್ಲಿನ ತತ್ವಗಳು , ಸತ್ವಗಳನ್ನು ಬದುಕಿನಲ್ಲಿ ಮೈಗೂಡಿಸಬೇಕು ಎಂದರು. ಎಲ್ಲರೂ ವಾಲ್ಮೀಕಿ ಬಗೆಗಿನ ಇತಿಹಾಸದ ಪುಟ ತಿರುವಿ ನೋಡುವುದು ಬಹಳ ಅವಶ್ಯ. ವಾಲ್ಮೀಕಿ ಕುರಿತ ಅನೇಕ ಪುರಾಣಗಳಲ್ಲಿ ದಂತಕಥೆಯಿರುವುದು ಆಶ್ಚರ್ಯ ಸಂಗತಿ. ಅದರ ಕುರಿತು ಆಳವಾಗಿ ತಿಳಿದುಕೊಳ್ಳುವುದು ಹೆಚ್ಚು ಉತ್ತಮ ಎಂದರು.  ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ವಿನಾಯಕ ಭಟ್ಟ ಗಾಳಿಮನೆ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ‍್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಫಾರ್ಮಸಿಯ ಮುಖ್ಯ ನಿರ್ವಾಹಕಿ ಡಾ. ಗ್ರೀಷ್ಮಾ ವಿವೇಕ್  ಆಳ್ವ, ಮೂಡುಬಿದಿರೆ ಎಂಸಿಎಎಸ್ ಬ್ಯಾಂಕ್ ಸಿಇಒ ಚಂದ್ರಶೇಖರ ಎಮ್, ಕಟೀಲಿನ ಸದಾನಂದ ಅಸ್ರಣ್ಣ, ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ  ಯುಎಇ ಮೂಲದ ಉದ್ಯಮಿ ಕೀರ್ತಿ, ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಪ್ತಾಹ ವಿದ್ಯಾರ್ಥಿ ಸಂಯೋಜಕ ವೈಶಾಖ್ ರಾಜ್ ಜೈನ್ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರಾವ್ಯ ನಡೆಸಿಕೊಟ್ಟರು.

Exit mobile version