ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಮಾಜಿಕ ರಂಗದಲ್ಲಿ ಸುಧೀರ್ಘವಾಗಿ ತೊಡಗಿಸಿಕೊಂಡ ಫಲವಾಗಿ ಇಂದು ದೇವರ ಸೇವೆ ಮಾಡುವ ಅವಕಾಶ ದೊರೆತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸುವುದಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹೇಳಿದರು.
ಅವರು ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದಕ್ಷಿಣ ಭಾರತದ ಪುಣ್ಯ ಕ್ಷೇತ್ರದಲ್ಲಿ ಸೇವೆ ಮಾಡುವುದು ನಮ್ಮ ಪುಣ್ಯವೆಂದು ಭಾವಿಸುತ್ತೇನೆ. ದೇವಳದ ಅಭಿವೃದ್ಧಿಯೊಂದಿಗೆ ದೇವಸ್ಥಾನದ ಮೂಲಕ ಊರಿನ ಅಭಿವೃದ್ಧಿಗೂ ಕೈಜೋಡಿಸುವುದಾಗಿ ತಿಳಿಸಿದರು.
ಬೈಂದೂರು ರೋಟರಿ ಟ್ರಸ್ಟ್ ಅಧ್ಯಕ್ಷರಾಗಿರುವ ಕೆ. ಬಾಬು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ 1ರ ಮಾಜಿ ಸಹಾಯಕ ಗವರ್ನರ್ ಸೋಮನಾಥನ್ ಆರ್., ನಿಯೋಜಿತ ಸಹಾಯಕ ಗವರ್ನರ್ ಐ. ನಾರಾಯಣ್, ಬೈಂದೂರು ರೋಟರಿ ಪೂರ್ವಾಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು. ಸುಧಾಕರ ಪಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಸುನಿಲ್ ಹೆಚ್. ಜಿ. ವಂದಿಸಿದರು.