Kundapra.com ಕುಂದಾಪ್ರ ಡಾಟ್ ಕಾಂ

ಕಲಾವಿದರೊಂದಿಗಿನ ಮುಖಾಮುಖಿ ಇಂದಿನ ತುರ್ತು: ಕೆರೆಮನೆ ಶಿವಾನಂದ ಹೆಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಯಾವುದಕ್ಕೂ ಸಮಯವಲ್ಲ ಎಂಬ ಆಧುನಿಕ ಜೀವನಶೈಲಿಯಿಂದ ಸಂಸ್ಕೃತಿ ನಾಶವಾಗುತ್ತಿದೆ. ಮೊಬೈಲ್ ಕಾರಣದಿಂದ ನಮ್ಮ ಸೃಜನಶೀಲತೆ, ತೊಡಗಿಕೊಳ್ಳುವಿಕೆ ಎಲ್ಲವೂ ಮಾಯವಾಗುತ್ತಿರುವ ಈ ಸಂದರ್ಭದ ನಡುವೆ, ಹೊರಕ್ಕೆ ಬಂದು ಕಲಾವಿದರೊಂದಿಗೆ ಮುಖಾಮುಖಿಯಾಗುವುದು ಮುಖ್ಯ ಇಡುಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಹೇಳಿದರು.

ಅವರು ಸುರಭಿ ರಿ. ಬೈಂದೂರು ಹಾಗೂ ಸಂಚಲನ ರಿ. ಬೈಂದೂರು ನೇತೃತ್ವದಲ್ಲಿ ಗುರುವಾರ ಸುರಭಿ ರಜತಯಾನದ ಅಂಗವಾಗಿ ಆಯೋಜಿಸಲಾದ ಇಡುಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಪ್ರಸ್ತುತಿಯ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲೆಯನ್ನು ಕೇವಲ ಮನೋರಂಜನೆಯ ಸರಕಾಗಿ ನೋಡದೇ ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವುದು ಮುಖ್ಯ. ಕಲಾವಿದ ಅಧ್ಯಯನಶೀಲನಾದಾಗ ಕಲೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.

ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಕೆರಾಡಿ ವರಸಿದ್ಧಿವಿನಾಯಕ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಶೆಟ್ಟಿ, ಸಂಚಲನ ಹೊಸೂರು ಅಧ್ಯಕ್ಷ ಮಾದೇವ ಮರಾಠಿ, ಕಾರ್ಯದರ್ಶಿ ರಾಜು ಮರಾಠಿ ಉಪಸ್ಥಿತರಿದ್ದರು.

ಸುರಭಿ ನಿರ್ದೇಶಕ ಸುಧಾಕರ ಪಿ. ಸ್ವಾಗತಿಸಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ವಂದಿಸಿದರು. ಶಿಕ್ಷಕ ರಾಜೇಶ್ ಪಡುವರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೆರೆಮನೆ ಶ್ರೀಧರ ಹೆಗಡೆ ಅವರಿಂದ ‘ಮಾರಾವತಾರ’ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನಗೊಂಡಿತು.

Exit mobile version