ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ವತಿಯಿಂದ ನವೆಂಬರ್ 1 ರಿಂದ 7ರ ವರೆಗೆ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಹಬ್ಬವಾಗಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .
ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನ.1ರಿಂದ ಪ್ರತಿದಿನ ಸಂಜೆ 7 ದಿನಗಳ ಕಾಲ ಸಂಜೆ 6 ಗಂಟೆಯಿಂದ ಸಭಾ ಕಾರ್ಯಕ್ರಮ, ಉಪನ್ಯಾಸ, ಮನೋರಂಜನೆ ನಡೆಯಲಿದೆ. ವಾರಗಳ ಕಾಲ ನಡೆ ಯುವ ಕನ್ನಡ ಹಬ್ಬಕ್ಕಾಗಿ ಧ್ವನಿ ಮತ್ತು ಬೆಳಕು ಸಂಘಟನೆ ಸಹಯೋಗದೊಂದಿಗೆ ಇಡಿ ಕುಂದಾಪುರ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು. ಪ್ರತಿ ಅಂಗಡಿ ಮುಂಗಟ್ಟುಗಳು ಅಲಂಕಾರಗೊಳ್ಳಲಿವೆ. ತೀರಾ ಅಪರೂಪ ಮತ್ತು ವಿಶಿಷ್ಟ ರೀತಿಯಲ್ಲಿ ಆಯೋಜನೆ ಗೊಂಡಿರುವ ಕನ್ನಡ ಹಬ್ಬದಲ್ಲಿ ಕನ್ನಡಿಗರು ಉತ್ಸಾಹದಿಂದ ಪಾಲ್ಗೊಳ್ಳಬೇಕೆಂಬು ವುದು ನಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದರು.
ಅ.31ರಂದು ಕನ್ನಡ ರಥೋತ್ಸವ:
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಥಮ ಬಾರಿಗೆ ಅ.31ರಂದು ಮಧ್ಯಾಹ್ನ ಕನ್ನಡ ರಥೋತ್ಸವ ನಡೆಯಲಿದೆ. ಜಾತಿಮತಪಂಥ ಸಹಿತ ಎಲ್ಲವನ್ನು ಮೀರಿ ಕನ್ನಡದ ಮನಸ್ಸುಗಳು ಒಂದುಗೂಡಿ ನಡೆಯುವ ರಥೋತ್ಸವವನ್ನು ಮಧ್ಯಾಹ್ನ 3ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಉದ್ಘಾಟಿಸುವರು. ಹಿರಿಯ. ಧಾರ್ಮಿಕ ನೇತಾರ ಬಿ. ಅಪ್ಪಣ್ಣ ಹೆಗ್ಡೆ ಶುಭಾಶಂಸನೆಗೈಯುವರು. ಉಡುಪಿ ಎಸ್ಪಿ ಡಾ.ಅರುಣ್ ಕೆ. ಮೆರವಣಿಗೆಗೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಸಂಸದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಶಾಸಕರು, ಎಲ್ಲ ರಾಜಕೀಯ ಪಕ್ಷಗಳ ಧುರೀಣರು, ಸಂಘ ಸಂಸ್ಥೆಗಳು, ಮಾಜಿ ಶಾಸಕರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಸಾಪ ತಾಲೂಕು ಘಟಕ, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಸಹಕಾರಿ ಧುರೀಣರು, ನಾನಾ ಸಂಘ ಸಂಸ್ಥೆಯ ಪ್ರತಿನಿಧಿಗಳು, ಕನ್ನಡಾಭಿಮಾನಿಗಳು ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ. 3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ರಥೋತ್ಸವದಲ್ಲಿ ಡೊಳ್ಳು ಕುಣಿತ, ಭಜನೆ ಕುಣಿತ, ಚಂಡೆ ವಾದನ, ತಟ್ಟಿರಾಯ, ಬೊಂಬೆ ಕುಣಿತ, ಭಜನಾ ತಂಡ, ಬೆಂಕಿಯಾಟ, ದಪ್ ಇತ್ಯಾದಿ ವೈವಿಧ್ಯಮಯ ಸ್ಥಳೀಯ ಸಂಸ್ಕೃತಿ ಪ್ರತಿಬಿಂಬಿಸುವ ಕಲಾಪ್ರಕಾರ ಗಳು ಒಳಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ರಾಜೇಶ್ ಕಾವೇರಿ, ತ್ರಿವಿಕ್ರಮ ಪೈ, ಕೆ. ಆರ್. ನಾಯ್ಕ, ದಾಮೋದರ ಪೈ, ಗಿರೀಶ್ ಜಿ.ಕೆ., ರಾಮಚಂದ್ರ ಬಿ.ಎನ್ ಉಪಸ್ಥಿತರಿದ್ದರು.

