Kundapra.com ಕುಂದಾಪ್ರ ಡಾಟ್ ಕಾಂ

ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯ ಗಂಟಿಧಾಮ – ಅಶಕ್ತ ಗೋವುಗಳ ಪಾಲನಾ ಕೇಂದ್ರ ಲೋಕಾರ್ಪಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಜಗತ್ತಿಗೆ ಗೋವುಗಳು ಒಂದು ಪ್ರಾಣಿಯಾದರೆ, ಭಾರತದಲ್ಲಿ ಅದು ಮಾತೆಯಾಗಿ ಪೂಜನೀಯ ಸ್ಥಾನ ಪಡೆದಿವೆ. ಅವುಗಳು ಸಂತೋಷದಲ್ಲಿರುವೆಡೆ ದೇವತೆಗಳು ಸಂತೋಷರಾಗುತ್ತಾರೆ ಎಂಬ ಮಾತಿದ್ದು, ಅಶಕ್ತ ಗೋವುಗಳ ರಕ್ಷಣೆ ಮಾಡುವುದು ಮಹಾನ್ ಪುಣ್ಯದ ಕಾರ್ಯವಾಗಿದೆ ಎಂದು ಹೃದಯ ವಿದ್ಯಾ ಫೌಂಡೇಷನ್ ಅಧ್ಯಕ್ಷ ವಿದ್ಯಾಸಾಗರ್ ಹೇಳಿದರು.

ತಗ್ಗರ್ಸೆ ಗ್ರಾಮದ ವಸ್ರೆ ಮೈಕಳದಲ್ಲಿ ಶಾಸಕ ಗುರುರಾಜ ಗಂಟಿಹೊಳೆಯವರ ಪರಿಕಲ್ಪನೆಯಂತೆ ನಿರ್ಮಾಣಗೊಂಡ ಗಂಟಿಧಾಮ – ಅಶಕ್ತ ಗೋವುಗಳ ಪಾಲನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯದ ಪ್ರಮುಖ ಶರಣ ಪಂಪವೆಲ್ ಮಾತನಾಡಿ, ಅಸಕ್ತ ಗೋವುಗಳ ರಕ್ಷಣೆಗಾಗಿ ಶಾಸಕರು ಮಾಡುತ್ತಿರುವ ಕಾಯಕ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿ, ಇಂದು ಗ್ರಾಮೀಣ ಭಾಗ ಜೀವಂತವಾಗಿರುವುದೇ ಗೋವುಗಳಿಂದ, ದೇಶದಲ್ಲಿ ಋಷಿ ಪರಂಪರೆ ಉಳಿಯಬೇಕಾದರೆ ಅವುಗಳಿಗೆ ವಿಶೇ? ಸ್ಥಾನ ಕಲ್ಪಿಸಬೇಕಾದ ಅಗತ್ಯವಿದೆ. ಇಂದು ದೇಶದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು,  ಬೀಡಾಡಿ ಜಾನುವಾರುಗಳು ಕಟುಕರ ಪಾಲಾಗುತ್ತಿದೆ ಎಂದು ಕಿಡಿಕಾರಿದ ಅವರು ಗೋವುಗಳ ರಕ್ಷಣೆಗಾಗಿ ಇಡೀ ಹಿಂದೂ ಸಮಾಜ ಹೋರಾಟಕ್ಕೀಳಿಯಬೇಕಾಗಿದೆ ಎಂದರು.

ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 846 ಎಕ್ರೆ ಗೋಮಾಳವಿದ್ದು, ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ಗೋಮಾಳ ಜಾಗವನ್ನು ಹೊಂದಿದೆ.  ಅವುಗಳಿಗೆ ಸಮರ್ಪಕವಾಗಿ ಗಡಿ ಗುರುತು ಮಾಡಿ, ಪ್ರತಿ ಗ್ರಾಮದಲ್ಲಿಯೂ ಗೋಶಾಲೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು.

ಸಮೃದ್ದ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ತಿಮ್ಮಣ ಹೆಗ್ಗಡೆ, ಬೈಂದೂರು ಪಶು ವೈದ್ಯಾಕಾರಿ ಡಾ. ನಾಗರಾಜ ಮರವಂತೆ ಉಪಸ್ಥಿತರಿದ್ದರು.

ಈ ಸಂದರ್ಭ ಗೋ ಸಂರಕ್ಷಕರಾದ ರಿತೇಶ್ ಪೂಜಾರಿ, ಸಂಜೀವ ದೇವಾಡಿಗ, ಪಶು ವೈದ್ಯ ಡಾ. ನಾಗರಾಜ ಮರವಂತೆ, ಕೃಷಿಕ ತಿಮ್ಮಣ್ಣ ಹೆಗ್ಗಡೆ, ಗೋಪಾಲ ಪೂಜಾರಿ, ವಿಜಯಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಗುರುರಾಜ ಗಂಟಿಹೊಳೆ ಅವರ ತಂದೆತಾಯಿ ಮಹಾಬಲ ಶೆಟ್ಟಿ ಹಾಗೂ ಪ್ರೇಮಾ ಶೆಟ್ಟಿ ದಂಪತಿ ಗೋ ಪೂಜೆ ನೆರವೇರಿಸಿದರು. ಭಾಗೀರಥಿ ಮಯ್ಯಾಡಿ ಪ್ರಾರ್ಥಿಸಿದರು, ಗೋಪಾಲ ಪೂಜಾರಿ  ಸ್ವಾಗತಿಸಿ, ಗಣಪತಿ ಹೋಬಳಿದಾರ್ ನಿರೂಪಿಸಿದರು.

Exit mobile version