Kundapra.com ಕುಂದಾಪ್ರ ಡಾಟ್ ಕಾಂ

ಕಲೆ, ಸಾಹಿತ್ಯ ವಿಕಸನಕ್ಕೆ ರಹದಾರಿ: ಸವಿ-ನುಡಿ ಹಬ್ಬದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ

ಗಂಗೊಳ್ಳಿ: ಉತ್ತಮ ಸಾಹಿತ್ಯಗಳು ನಮಗೆ ನಿಜವಾದ ಜ್ಞಾನ ವಿವೇಕವನ್ನು ನೀಡುತ್ತದೆ. ಮಾನವೀಯ ಸಂಬಂಧಗಳು ಬೆಳೆಯುತ್ತದೆ. ನಮ್ಮಲ್ಲಿ ನೈತಿಕ ಸ್ಥೈರ್ಯವನ್ನು ನೀಡುತ್ತದೆ. ಆದರೆ ಪರಿಸರವನ್ನು ಮತ್ತು ಸಂಕುಚಿತ ಆವರಣವನ್ನು ಮೀರಿ ಬೆಳೆಯಲು ಸಾಹಿತ್ಯ, ಕಲೆ ಮೊದಲಾದವುಗಳು ಸಹಕಾರಿಯಾಗಲಿದೆ. ಸಾಹಿತ್ಯ ಎನ್ನುವುದು ವಿಕಾಸದ ರಿಲೇ ಓಟ ಇದ್ದಂತೆ. ಸಾಹಿತ್ಯ ಕ್ಷೇತ್ರದಲ್ಲಿ ದುಡಿದು ಸಾಧನೆ ಮಾಡಿದ ಅನೇಕ ಸಾಧಕರಿದ್ದು, ಅವರ ಈ ಸಾಹಿತ್ಯದ ಓಟವನ್ನು ಇಂದಿನ ಯುವ ಜನಾಂಗ ಮುಂದುವರಿಸಬೇಕು. ಓದುವುದು ನಮ್ಮ ಬದುಕಿಗೆ ಬೇಕಾಗಿದ್ದು, ಬದುಕಿನಲ್ಲಿ ಎದುರಾಗುವ ಪರೀಕ್ಷೆಗಳಿಗೆ ಸಾಹಿತ್ಯವೇ ಪಠ್ಯಪುಸ್ತಕ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಕುಂದಪ್ರಭ ಕುಂದಾಪುರ, ಸಾಹಿತ್ಯ ವೇದಿಕೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು.ಶೇಷಗರಿ ಶೆಣೈ ಸ್ಮರಣಾರ್ಥ ಆಯೋಜಿಸಿದ್ದ ಸವಿ-ನುಡಿ ಹಬ್ಬ 2015 ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಸಾಹಿತ್ಯ ಓದುವುದು ಬಹಳಷ್ಟು ಕಡಿಮೆಯಾಗುತ್ತಿದೆ. ಚೆಕ್ ಪುಸ್ತಕ, ಪಾಸ್ ಪುಸ್ತಕ ಹಾಗೂ ಫೇಸ್‌ಬುಕ್ ಬಿಟ್ಟರೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿ ಕ್ಷೀಣಿಸುತ್ತಿದೆ. ಇದು ಬಹಳ ಬಿಕ್ಕಟ್ಟು ಸೃಷ್ಟಿಸುತ್ತದೆ. ವೈಚಾರಿಕತೆ, ಬೌದ್ಧಿಕತೆ ಹಾಗೂ ಚಿಂತನೆಗಳು ನಮಲ್ಲಿ ಅತ್ಯಗತ್ಯವಾಗಿ ಬೇಕಾಗಿದೆ. ಇಂದಿನ ದಿನಗಳಲ್ಲಿ ಹಣ ಮತ್ತು ರಾಜಕೀಯ ತಾಂಡವಾಡುತ್ತಿದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಅವಶ್ಯಕವಾಗಿದ್ದರೂ ಅದರ ಬಳಕೆಯಲ್ಲಿ ವಿವೇಕ ಬೇಕಿದೆ. ಹಿಂದೆ ಸರಳ, ಪ್ರಾಮಾಣಿಕ ಜೀವನ ನಡೆಸುತ್ತಿದ್ದ ವ್ಯಕ್ತಿಗಳು ನಮಗೆ ಪ್ರೇರಕರಾಗುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಇದು ಮಯವಾಗುತ್ತಿದೆ. ಪ್ರತಿಯೊಬ್ಬರಲ್ಲಿ ಬಹಳಷ್ಟು ಪ್ರತಿಭೆಗಳಿವೆ. ಆದರೆ ಅವುಗಳನ್ನು ಪ್ರಚುರಪಡಿಸಲು ಬೆಳೆಸಲು ಸರಿಯಾದ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ವೈಚಾರಿಕತೆಯನ್ನು ಪ್ರಚೋದಿಸುವ ಕಲೆ ಸಾಹಿತ್ಯ. ಚಿಂತನಶೀಲತೆ, ತನ್ಮಯತೆಯನ್ನು ನಮ್ಮಲ್ಲಿ ಬೆಳೆಸಿ ನಾವು ಬದುಕಲು, ಬೆಳೆಯಲು ನಮಗೆ ಬೇಕಾಗುವ ದೃಷ್ಟಿಕೋನವನ್ನು ಸಾಹಿತ್ಯದಂತಹ ಕಲೆಗಳು ನಮಗೆ ನೀಡುವ ಮೂಲಕ ಬದುಕಿನಲ್ಲಿ ಚಿಂತನೆ ಮೂಡಿಸಲು ನೆರವಾಗುತ್ತದೆ. ಬರವಣಿಗೆ ಎಂಬುದು ಚಿಂತನೆಯ ಜ್ಞಾನೇಂದ್ರಿಯ. ಚಿಂತನೆಯೊಂದಿಗೆ ಬೆರೆತಷ್ಟು ಸಾಹಿತ್ಯ ನಮಗೆ ಹತ್ತಿರವಾಗುತ್ತದೆ. ಅಹಂಕಾರದಿಂದ ದೂರ ಹೋದಷ್ಟು, ಬರವಣಿಗೆಯಲ್ಲಿ ತೊಡಗಿಸಿಕೊಂಡಿದಷ್ಟು ಸಾಹಿತ್ಯ ನಮಗೆ ಹೆಚ್ಚು ಹತ್ತಿರವಾಗುತ್ತದೆ ಎಂದರು.

ಯಕ್ಷಗಾನಗಿಂತ ದೊಡ್ಡ ಕಲೆ ಬೇರೊಂದಿಲ್ಲ. ಜಾತಿ, ಮತ, ಧರ್ಮ, ಅಂತಸ್ತನ್ನು ಮೀರಿ ಬೆಳೆದ ಯಕ್ಷಗಾನ ಇಂದಿಗೂ ತನ್ನ ವರ್ಚಸ್ಸನ್ನು ವೃದ್ಧಿಸಿಕೊಂಡು ಬೆಳೆಯುತ್ತಿದೆ. ವಿಜ್ಞಾನಕ್ಕಿಂತ ದೊಡ್ಡ ಕಲೆಯಿಲ್ಲ. ಕಲೆಗಿಂತ ದೊಡ್ಡ ವಿಜ್ಞಾನವಿಲ್ಲ. ವಿಜ್ಞಾನ ಬೇರೆ ಕಲೆ ಬೇರೆ ಎಂಬ ಮೂಡನಂಬಿಕೆ ನಮ್ಮಿಂದ ದೂರವಾಗಬೇಕಿದೆ. ಸಾಹಿತ್ಯ, ಸಂಗೀತ, ಕಲೆ, ಕಾವ್ಯ ಮೊದಲಾದವುಗಳು ನಮಗೆ ನಿಜವಾದ ಬದುಕಿನ ರುಚಿಯನ್ನು ನೀಡುತ್ತದೆ. ಕಲೆ ಇರುವುದು ನಮ್ಮ ವಿಕಾಸಕ್ಕೆ. ಸ್ಪರ್ಧೆ ಇರುವುದು ನಿಮಿತ್ತ ಮಾತ್ರ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ತಮಗೆ ಇಷ್ವವಾದ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡು ಅದರ ನಿಜವಾದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉದ್ಯಮಿಗಳಾದ ದತ್ತಾನಂದ ಗಂಗೊಳ್ಳಿ, ಪ್ರಶಾಂತ ಕುಂದರ್ ಕೋಟ, ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಕುಂದಪ್ರಭ ಸಂಪದಕ ಯು.ಎಸ್.ಶೆಣೈ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್ ಅಭಿನಂದನಾ ಮಾತುಗಳನ್ನಾಡಿದರು. ಎಸ್.ವಿ.ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕವಿತಾ ಎಂ.ಸಿ., ಪ್ರೌಢಶಾಲೆಯ ಉಪಪ್ರಾಂಶುಪಾಲ ವಾಮನದಾಸ ಭಟ್, ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Exit mobile version