Kundapra.com ಕುಂದಾಪ್ರ ಡಾಟ್ ಕಾಂ

ಕ್ರಿಯೇಟಿವ್ ಕಾಲೇಜಿನಲ್ಲಿ “ಅಕ್ಷರಯಾನ” ಯುವ ಬರಹಗಾರರ ಸಮ್ಮೇಳನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ” ಕಾರ್ಯಕ್ರಮವು ಬುಧವಾರ ದಂದು ಜರುಗಿತು.

ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, ಮಾಜಿ ಸಚಿವರು ಕರ್ನಾಟಕ ಸರ್ಕಾರ ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಯುವ ಲೇಖಕರು ತಮ್ಮಲ್ಲಿನ ಪ್ರತಿಭೆ, ಸೃಜನಶೀಲತೆಗಳನ್ನು ಬಳಸಿಕೊಂಡು ತಮ್ಮ ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಲು ಅಣಿಗೊಳ್ಳಬೇಕು ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಕಾಶ್ ಬೆಳವಾಡಿ, ಲೇಖಕರು, ನಟ ಮತ್ತು ನಿರ್ದೇಶಕರು ಬೆಂಗಳೂರು ಇವರು ಮಾತನಾಡಿ, ಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಎಸ್. ಎನ್. ಸೇತುರಾಮ್, ರಂಗ ಕಲಾವಿದರು, ನಟ ಮತ್ತು ನಿರ್ದೇಶಕರು ಬೆಂಗಳೂರು ಇವರು ಮಾತನಾಡಿ ಪಠ್ಯೇತರ ಚಟುವಟಿಕೆಗಳು ಮಕ್ಕಳ  ಸವಾಂಗೀಣ ಬೆಳವಣಿಗೆಗೆ ಸಹಕಾರಿ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಬೀಜ ಬಿತ್ತಿದರೆ ಜೀವನಪಯಂತ ಬೆಳೆಯುವ ಶಕ್ತಿ, ಆತ್ಮವಿಶ್ವಾಸ, ಜ್ಞಾನ ಲಭಿಸುತ್ತದೆ ಎಂದರು.

ಪ್ರತಾಪ್ ಸಿಂಹ ಖ್ಯಾತ ಲೇಖಕರು, ಮಾಜಿ ಸಂಸದರು, ಮೈಸೂರು ಇವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಯುವ ಜನಾಂಗವನ್ನು ಚಿಂತನೆಗೆ, ಯೋಚನೆಗೆ ಹಚ್ಚುವ ಕಾರ್ಯಕ್ರಮವಾಗಿದೆ. ಅಮೂರ್ತ ಭಾವನೆಗಳಿಗೆ ಭಾಷೆಯ ಮೂಲಕ ಮೂರ್ತ ರೂಪವನ್ನು ಕೊಡುವ ಪ್ರಯತ್ನ ಮಾಡಿ ಎಂದು ಕರೆಕೊಟ್ಟರು.

ಈ ಸುಸಂದರ್ಭದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಿಂದ ವಿ. ರವಿಶಂಕರ ಹೆಗಡೆ ಅವರ ಭಾರತ ಸಾವಿತ್ರೀ,  ಸುದೀಕ್ಷಾ ಎಸ್. ಪೈ ಅವರ ಬಚ್ಚಿಟ್ಟ ಭಾವಗಳು, ಕೆ. ಅಶೋಕ್ ಕುಮಾರ್ ರವರ ಸೂರ್ಯಾಯ  ನಮಃ, ಅನುಬೆಳ್ಳೆ ಕಾವ್ಯನಾಮಾಂಕಿತ ರಾಘವೇಂದ್ರ ಬಿ. ರಾವ್ ಅವರ ಬ್ಲ್ಯಾಕ್ ಕಾಫಿ, ರಾಜೇಂದ್ರ ಭಟ್ ರವರ ರಾಜಪಥ ಎಂಬ ಐದು ಪುಸ್ತಕಗಳು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.

ಪ್ರತಾಪ್ ಸಿಂಹ ಅವರು ” ನನ್ನ ಬರವಣಿಗೆ, ನನ್ನ ಬದ್ಧತೆ ” ಎಂಬ ವಿಚಾರದ ಕುರಿತು, ಎಸ್. ಎನ್. ಸೇತುರಾಮ್ ಅವರು “ಕನ್ನಡ ಸಾಹಿತ್ಯದ ವರ್ತಮಾನ ಮತ್ತು ಭವಿಷ್ಯ” ಎಂಬ ವಿಷಯದ ಬಗ್ಗೆ ಹಾಗೂ ಪ್ರಕಾಶ್ ಬೆಳವಾಡಿರವರು ” ಸಾಹಿತ್ಯದ ಮೂಲಕ ರಾಷ್ಟ್ರೀಯ ಪ್ರಜ್ಞೆ” ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದ ಸಮನ್ವಯಕಾರರಾಗಿ ಪ್ರಕಾಶ್ ಮಲ್ಪೆ  ಖ್ಯಾತ ವಾಗ್ಮಿಗಳು ಮತ್ತು ಚಿಂತಕರು, ಅವಿನಾಶ್ ಕಾಮತ್ ನಿರೂಪಕರು ಮತ್ತು ಪತ್ರಕರ್ತರು, ರಾಜೇಂದ್ರ ಭಟ್ ಖ್ಯಾತ ವಾಗ್ಮಿಗಳು ಮತ್ತು ಅಂಕಣಕಾರರು ಇವರು ಪಾಲ್ಗೊಂಡರು.   

ಸಮಾರೋಪ
ಪ್ರಕಾಶ್ ಬೆಳವಾಡಿಯವರ ಅಧ್ಯಕ್ಷತೆಯಲ್ಲಿ ಅಕ್ಷರಯಾನ ಬರವಣಿಗೆಯ ಮೆರವಣಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು ಮಾತನಾಡಿ ವೃತ್ತಿ ಯಾವುದೇ ಇರಲಿ, ವ್ಯಕ್ತಿಯ ಪ್ರವೃತ್ತಿ ತುಂಬ ಮುಖ್ಯ ಎಂದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರು, ಪ್ರಾಂಶುಪಾಲರೂ ಆಗಿರುವ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ ಮನಸ್ಸಿನ ಭಾವನೆ, ನೋವು, ನಲಿವು, ವೇದನೆಗಳನ್ನು ಶಬ್ದ ರೂಪದಲ್ಲಿ ಪ್ರಕಟ ಮಾಡುವವರಿಗೆ ಮಾತ್ರ ಸಾಹಿತ್ಯ ಬರೆಯಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಕಾಶ್ ಬೆಳವಾಡಿ ಅವರು ಬರಹಗಾರರು ಮಾನವೀಯ ಕಾಳಜಿ, ಕಳಕಳಿಯೊಂದಿಗೆ ಸೂಕ್ಷ್ಮ ಸಂವೇದನಾಶೀಲರಾಗಿ ಸಾಹಿತ್ಯ ರಚಿಸಿ ವರ್ತಮಾನದ ವಾರಸುದಾರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು ಎಂದರು. ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಶ್ವತ್ ಎಸ್ ಎಲ್, ಆದರ್ಶ ಎಂ. ಕೆ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕೊಡಲಾಯಿತು. ಪುಸ್ತಕ ಮನೆ ಪ್ರಕಾಶನದ ವತಿಯಿಂದ ಎಲ್ಲಾ ಬಗೆಯ ಸಾಹಿತ್ಯ ಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿ, ಹಲವಾರು ಇದರ ಸದುಪಯೋಗವನ್ನು ಪಡೆದುಕೊಂಡರು.

ಕಾರ್ಕಳದ ಹಲವಾರು ಶಾಲಾ – ಕಾಲೇಜುಗಳಿಂದ ಒಂದು ಸಾವಿರಕ್ಕಿಂತಲೂ ಮಿಗಿಲಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಹಲವಾರು ಶಾಲಾ-ಕಾಲೇಜುಗಳ ಶಿಕ್ಷಕ, ಉಪನ್ಯಾಸಕ ವರ್ಗದವರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀ ಶಿರಡಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಆಶಿಶ್ ಶೆಟ್ಟಿ ಅವರು ವಂದನಾರ್ಪಣೆಗೈದರು. ಖ್ಯಾತ ವಾಗ್ಮಿಗಳು, ರಾಷ್ಟ್ರೀಯ ತರಬೇತುದಾರರು ಆಗಿರುವ ರಾಜೇಂದ್ರ ಭಟ್ ಅವರು ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್. ಕೆ. ಅವರು ಕಾರ್ಯಕ್ರಮ ನಿರ್ವಹಿಸಿಕೊಟ್ಟರು.

Exit mobile version