ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನವೆಂಬರ್ 1 ರಂದು ಭಂಡಾರ್ಕಾರ್ಸ್ ಕಾಲೇಜಿನ ಆವರ್ತ ವೇದಿಕೆ ಮತ್ತು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇವರ ಸಹಯೋಗದಲ್ಲಿ 69ನೇ ರಾಜ್ಯೋತ್ಸವ ತಾಳಮದ್ದಳೆ ಹಾಗೂ ಈ ವರ್ಷದ “ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಪುರಸ್ಕೃತ ಬಡಗುತಿಟ್ಟು ಯಕ್ಷಗಾನದ ಯುವ ಕಲಾವಿದರಾದ ಚಂದ್ರಕಾಂತ ರಾವ್, ಮೂಡುಬೆಳ್ಳೆ ಅವರಿಗೆ ಪ್ರದಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಹೆಚ್. ಶಾಂತಾರಾಮ್ ಮಾತನಾಡಿ, ಇದು ಯಕ್ಷಗಾನ ಪುರಸ್ಕಾರ ಇದು ಪ್ರಶಸ್ತಿ ಅಲ್ಲ. ಅವರ ಸಾಧನೆ ದೊಡ್ಡದು. ಅವರ ಸಾಧನೆ ವಿಶ್ವದ ಉದ್ದಗಲಕ್ಕೂ ಬೆಳೆಯಲಿ. ಈ ಯಕ್ಷಗಾನ ಪುರಸ್ಕಾರವು ಅವರ ಸಾಧನಾಪೂರ್ಣ ಯಶಸ್ಸಿಗೆ ಪ್ರೇರಣೆಯಾಗಲಿ. ಅವರು ಕೀರ್ತಿಶಾಲಿಯಾಗಲಿ ಎಂದು ಹೇಳಿದರು.
ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆ ಅಭಿನಂದನಾ ಭಾಷಣವನ್ನು ಮಾಡಿದರು.
ಈ ವರ್ಷದ “ಡಾ. ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಪುರಸ್ಕೃತ ಬಡಗುತಿಟ್ಟು ಯಕ್ಷಗಾನದ ಯುವ ಕಲಾವಿದರಾದ ಚಂದ್ರಕಾಂತ ರಾವ್, ಮೂಡುಬೆಳ್ಳೆ ಅವರು ಮಾತನಾಡಿ, ಈ ಪುರಸ್ಕಾರ ದೊರೆತಿರುವುದು ನನ್ನ ಪಾಲಿಗೆ ಅದೃಷ್ಟ ಮತ್ತು ಸುಯೋಗವಾಗಿದೆ. ಈ ಪುರಸ್ಕಾರವನ್ನು ನನಗೆ ಯಕ್ಷಗಾನ ವಿದ್ಯೆ ಕಲಿಸಿದ ಯಕ್ಷಗಾನ ಗುರುಗಳು ಮತ್ತು ವೃತ್ತಿ ಜೀವನದ ಸಹಕಾರಿ ಮೇಳದ ಯಜಮಾನರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಹಿರಿಯ ವಿಶ್ವಸ್ಥರಾದ ಶಾಂತಾರಾಮ್ ಪ್ರಭು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ಆವರ್ತ ಯಕ್ಷ ವೇದಿಕೆಯ ಸಂಯೋಜಕರಾದ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ ಶುಭನುಡಿಗಳನ್ನಾಡಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಮ್.ಗೊಂಡ ವಂದಿಸಿದರು. ಉಪನ್ಯಾಸಕ ದುರ್ಗಾ ಪ್ರಸಾದ್ ಮಯ್ಯ ಅಭಿನಂದನಾ ಪತ್ರ ವಾಚಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ 89.6 ಎಫ್.ಎಮ್ ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಅಲ್ಸೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ 69ನೇ ರಾಜ್ಯೋತ್ಸವ ತಾಳಮದ್ದಳೆ ಪ್ರಯುಕ್ತ ಪ್ರಸಿದ್ಧ ಕಲಾವಿದರಿಂದ ಶರಸೇತು ಬಂಧ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ತಾಳಮದ್ದಳೆಯಲ್ಲಿ ಭಾಗವತರಾಗಿ ಚಂದ್ರಕಾಂತ ರಾವ್, ಮೂಡುಬೆಳ್ಳೆ, ಮದ್ದಲೆಯಲ್ಲಿ ಎನ್. ಜಿ .ಹೆಗಡೆ, ಯಲ್ಲಾಪುರ, ಚಂಡೆಯಲ್ಲಿ ರಾಮಕೃಷ್ಣ, ಮಂದಾರ್ತಿ ಹಾಗೂ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಹರೀಶ್, ಬಳಂತಿಮೊಗರು, ಪವನ್ ಕಿರಣ್ಕೆರೆ ಭಾಗವಹಿಸಿದ್ದರು.