Kundapra.com ಕುಂದಾಪ್ರ ಡಾಟ್ ಕಾಂ

ನ.20-22: ಬೈಂದೂರಿನಲ್ಲಿ ಸುರಭಿ ನಾಟಕೋತ್ಸವ

ಬೈಂದೂರು: ಇಲ್ಲಿನ ಸುರಭಿ (ರಿ.) ಬೈಂದೂರು ‘ರಂಗಧ್ವನಿ – 2015’ ಮೂರು ದಿನಗಳ ನಾಟಕೋತ್ಸವದಲ್ಲಿ ರಂಗಭೂಮಿಯ ಮೂಲ ಆಶಯ ಕೇವಲ ಮನರಂಜನೆಯಲ್ಲ ಬದಲಿಗೆ ಸಾಮಾಜಿಕ ಅಸಮಾನತೆ, ಸ್ತ್ರೀ ಶೋಷಣೆ, ಧರ್ಮಾಧಾರಿತ ಸಂಘರ್ಷ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹಾಗೂ ವ್ಯವಸ್ಥೆಯಲ್ಲಿನ ಅನ್ಯಾಯದ ವಿರುದ್ಧ ದನಿಯಾಗುವುದಾಗಿದೆ ಎಂಬ ಮಾತನ್ನು ಪುಷ್ಠಿಕರಿಸುವ ರಂಗ ಪ್ರದರ್ಶನ ನಡೆಯಲಿದೆ. ರಂಗಭೂಮಿಯ ಮೂಲಕ ಮಹಿಳಾ ಶೋಷಣೆಯ ವಿರುದ್ಧ ರಂಗಧ್ವನಿ ಮೊಳಗಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕಿ ವೈದೇಹಿ ಚಾಲನೆ ನೀಡಲಿದ್ದಾರೆ.

ಮಹಿಳೆ ಮೇಲೆ ಈ ಸಮಾಜದಲ್ಲಿ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅಸ್ತಿತ್ವಕ್ಕಾಗಿ ಅವಳು ನಡೆಸುವ ಹೋರಾಟ, ಪ್ರತಿರೋಧದ ವಿಭಿನ್ನ ನೆಲೆಗಳನ್ನು ತೋರಿಸುವ, ವರ್ಗ ಸಂಘರ್ಷದ ವಿವಿಧ ಮಜಲುಗಳನ್ನು ಹಾಗೂ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಿರುವ ನಾಟಕಗಳಾದ ರಂಗಮಂಟಪ ಬೆಂಗಳೂರು ಅಭಿನಯಿಸುವ, ವೈದೇಹಿಯವರ ಕಥೆಗಳ ಆಧಾರಿತ ’ಅಕ್ಕು’, ಡಾ. ಶ್ರೀಪಾದ್ ಭಟ್ಟರ ನಿರ್ದೇಶನದ ಸುರಭಿ ಬೈಂದೂರು ಅಭಿನಯಿಸುವ, ಕನ್ನಡ ಕಾವ್ಯಗಳ ರಂಗಪ್ರಸ್ತುತಿ ’ಕಾವ್ಯರಂಗ’, ರಥಬೀದಿ ಗೆಳೆಯರು ಉಡುಪಿಯವರ ಅಭಿನಯದ, ಕೆ. ಮಾಧವನ್ ಅವರ ಮೂಲ ಕಥೆಯನ್ನು ಅಭಿಲಾಷ ಎಸ್. ರಂಗರೂಪಾಂತರಿಸಿ, ಡಾ. ಶ್ರೀಪಾದ್ ಭಟ್ಟರು ನಿರ್ದೇಶಿಸಿದ ’ಮಹಿಳಾ ಭಾರತ’ ಈ ಮೂರು ನಾಟಕಗಳ ಪ್ರದರ್ಶನ ಅನುಕ್ರಮವಾಗಿ ನವೆಂಬರ್ 20, 21, 22ರ ಪ್ರತಿದಿನ ಸಂಜೆ 7 ಗಂಟೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಲಿದೆ.

ಈ ಉತ್ಸವದಲ್ಲಿ ಬೈಂದೂರಿನ ಶಾಸಕ ಗೋಪಾಲ ಪೂಜಾರಿ, ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್, ರಂಗಕರ್ಮಿ ನಾಗೇಶ್ ಕುಮಾರ್ ಉದ್ಯಾವರ ಸೇರಿದಂತೆ ವಿವಿಧ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಹಿರಿಯ ರಂಗಕಲಾವಿದೆ ಗೀತಾ ಸುರತ್ಕಲ್, ಪ್ರಸಿದ್ಧ ರಂಗನಿರ್ದೇಶಕ ಡಾ. ಶ್ರೀಪಾದ್ ಭಟ್‌ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version