Kundapra.com ಕುಂದಾಪ್ರ ಡಾಟ್ ಕಾಂ

ರಕ್ತದಾನವು ಸಮಾಜಕ್ಕೆ ನೀಡುವ ಅತ್ಯುತ್ತಮ ಸೇವೆ: ಗೀತಾ ರಾವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ
’ಜೀವನದಲ್ಲಿ ಒಮ್ಮೆಯಾದರೂ ರಕ್ತದಾನಿಯಾಗಿ, ಅದು ನೀವು ಸಮಾಜಕ್ಕೆ ನೀಡುವ ಅತ್ಯುತ್ತಮ ಸೇವೆಯಾಗುತ್ತದೆ’ ಎಂದು  ಲಯನ್ಸ್ 317ಡಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಆರೋಗ್ಯ ಕೇಂದ್ರ, ಮಂಗಳೂರಿನ ಕೆಎಂಸಿ ಆಸ್ಪತ್ರೆ, ವೆನ್‌ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆ, ನಿಡ್ಡೋಡಿ ಲಯನ್ಸ್ ಕ್ಲಬ್, ಆಳ್ವಾಸ್ ಚಿಗುರು ವಿದ್ಯಾರ್ಥಿ ವೇದಿಕೆ, ಆಳ್ವಾಸ್ ಎನ್‌ಎಸ್‌ಎಸ್, ಆಳ್ವಾಸ್ ರೆಡ್‌ಕ್ರಾಸ್ ಸಹಯೋಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನವು ಶ್ರೇಷ್ಠ ದಾನವಾಗಿದ್ದು, ಅತ್ಯಂತ ಕಠಿಣ ಸಂದರ್ಭದಲ್ಲಿ ರಕ್ತದಾನ ಮಾಡಿ ನೆರವಾಗುವುದು ಅತ್ಯುತ್ತಮ ಸೇವೆಯಾಗಿದೆ ಎಂದರು.

ಆಳ್ವಾಸ್ ಕಾಲೇಜು ಶಿಕ್ಷಣದ ಜೊತೆ ಸಂಸ್ಕೃತಿ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದು, ಮಾನವೀಯ ಮೌಲ್ಯಗಳಿಗೆ ಒತತ್ತು ನೀಡುತ್ತಿದೆ. ರಕ್ತದಾನದಂತಹ ಸಮಾಜ ಕಾರ್ಯಗಳ ಮೂಲಕ ನವ ಪೀಳಿಗೆಗೆ ಮಾದರಿಯಾಗಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ನಿಡ್ಡೋಡಿ ಲಯನ್ ಕ್ಲಬ್ ಅಧ್ಯಕ್ಷೆ ಸರಿತಾ ಜೆ. ಶೆಟ್ಟಿ, ಪ್ರಾದೇಶಿಕ ಅಧ್ಯಕ್ಷ ಸುಜಿತ್ ಸಾಲಿಯಾನ್, ವಲಯ ಅಧ್ಯಕ್ಷ ಸ್ಟ್ಯಾನಿಮಿರಾಂಡ, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮತ್ತು ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಮೂಡುಬಿದಿರೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸುಶ್ಮಿತಾ ಶೆಟ್ಟಿ, ಆಳ್ವಾಸ್ ಚಿಗುರು ವಿದ್ಯಾರ್ಥಿ ವೇದಿಕೆಯ ಶಶಾಂಕ್ ಇದ್ದರು. 

ವಿದ್ಯಾರ್ಥಿನಿ ರಶ್ಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮೂಡುಬಿದಿರೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ನಿಡ್ಡೋಡಿ ಲಯನ್ಸ್ ಕ್ಲಬ್ ಕಾರ‍್ಯಕ್ರಮಕ್ಕೆ ಸಹಕಾರ ನೀಡಿತು.

ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 270 ಯುನಿಟ್ ರಕ್ತ ಸಂಗ್ರಹಿಸಲಾಯಿತು. 

Exit mobile version