Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕು ಪಂಚಾಯತ್‌ ಆವರಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕಛೇರಿ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ತಾಲೂಕು ಪಂಚಾಯತ್‌ ಆವರಣದಲ್ಲಿ ಆರಂಭಿಸಲಾದ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯನ್ನು ಶುಕ್ರವಾರ ಪ್ರಗತಿಪರ ಕೃಷಿಕ ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು.

ಈ ವೇಳೆ ಅವರು ಮಾತನಾಡಿ, ರಾಜ್ಯ ಸರ್ಕಾರ ಅಶಕ್ತರಿಗೆ, ದುರ್ಬಲರಿಗೆ ಆರ್ಥಿಕ ಶಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಪಂಚಗ್ಯಾರಂಟಿ ಯೋಜನೆ ಜಾರಿಗೊಳಿಸಿ, ವಾರ್ಷಿಕವಾಗಿ ಸುಮಾರು 53 ಸಾವಿರ ಕೋಟಿ ರೂ. ಅನುದಾನ ಒದಗಿಸುತ್ತಿದೆ. ರಾಜ್ಯದ ಸುಮಾರು ಶೇ.90ರಷ್ಟು ಜನರು ಒಂದಿಲ್ಲೊದು ರೀತಿಯಲ್ಲಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ, ಆದರೆ ಕೆಲವು ಫಲಾನುಭವಿಗಳೇ ಈ ಯೋಜನೆಯ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ, ಇದು ವಿಷಾಧನೀಯ ಸಂಗತಿಯಾಗಿದೆ. ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿಯೂ ಅನುಷ್ಠಾನ ಸಮಿತಿ ರಚಿಸಿರುವುದು ಶ್ಲಾಘನೀಯವಾಗಿದ್ದು, ಸರ್ಕಾರದ ಗ್ಯಾರಂಟಿ ಅರ್ಹರಿಗೆ  ತಲುಪಿಸುವ ಬಹಳ ದೊಡ್ಡ ಜವಾಬ್ದಾರಿ ಅನುಷ್ಠಾನ ಸಮಿತಿ ಮೇಲಿದೆ ಎಂದರು.

ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಮಾತನಾಡಿ, ಪಂಚಗ್ಯಾರಂಟಿ ಯೋಜನೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವು ಅರ್ಹರು ಈ ಯೋಜನೆಯಿಂದ ವಂಚಿತರಾಗಿದ್ದಾರೆ, ಈ ಬಗ್ಗೆ ಅಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿಯೂ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಬೈಂದೂರು ಪಟ್ಟಣಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಪಡುವರಿ, ನಾಗರಾಜ ಗಾಣಿಗ, ಜಿ.ಪಂ. ಮಾಜಿ ಸದಸ್ಯ ಶಂಕರ ಪೂಜಾರಿ, ಅನುಷ್ಠಾನ ಸಮಿತಿಯ ಸದಸ್ಯರಾದ ಪ್ರಭಾಕರ ನಾಯ್ಕ, ಮಾಲತಿ ಶಿವಾನಂದ, ರಾಮ ಪೂಜಾರಿ, ಗುಲಾಬಿ ಪೂಜಾರಿ, ಸೂರ್ಯಕಾಂತಿ ಡಿ., ಅನಿಶ್ ಕುಮಾರ್, ಲಕ್ಷ್ಮಣ ಆಚಾರ್ಯ, ಗಣೇಶ ಗಾಣೀಗ, ರಾಘವೇಂದ್ರ ಬಿಲ್ಲವ, ದೇವದಾಸ ವಿ.ಜೆ, ಅಪ್ಪಣ್ಣ ಶೆಟ್ಟಿ, ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್ ಶಿರೂರು, ತಾ.ಪಂ. ಅಕಾರಿ ಸುರೇಶ ಉಪಸ್ಥಿತರಿದ್ದರು. ಗಣೇಶ ಪೂಜಾರಿ ಯೋಜನಾನಗರ ಸ್ವಾಗತಿಸಿ, ನಿರೂಪಿಸಿದರು.

ಇದನ್ನೂ ಓದಿ ► ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಛೇರಿ ಉದ್ಘಾಟನೆ – https://kundapraa.com/?p=78869 .

Exit mobile version