ಕುಂದಾಪು ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ದಿನಾಂಕ ನ.8 ರಂದು ಉಡುಪಿ ಜಿಲ್ಲೆಯ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಅಂತರ್ ಶಾಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಜರುಗಿತು.
ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿಗಳಾದ ಜಯಾನಂದ ಹೋಬಳಿದಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿ, ಕ್ರೀಡೆಯಲ್ಲಿ ಶ್ರದ್ಧೆ, ನಿಷ್ಠೆ, ಸಮಯಪ್ರಜ್ಞೆ ಅತ್ಯಗತ್ಯ. ನಮ್ಮ ನಾಡಿನ ಕ್ರೀಡಾಪಟುಗಳು ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದ್ದಾರೆ. ಅವರ ಸಾಧನೆ ಇಂದಿನ ಆಟಗಾರರಿಗೆ ಸ್ಪೂರ್ತಿಯಾಗಿದೆ. ಆಟದಲ್ಲಿ ತೀರ್ಪುಗಾರರ ಬಗ್ಗೆ, ನಿಯಮಗಳ ಬಗ್ಗೆ ಗೌರವದಿಂದ ವರ್ತಿಸಬೇಕು. ನಿಮ್ಮನ್ನು ಬೇರೆಯವರು ಗುರುತಿಸುವಂತೆ ಆಟಗಳನ್ನು ಆಡಬೇಕು ಎಂದು ನುಡಿಯುತ್ತಾ ಆಟಗಾರರನ್ನು ಹುರಿದುಂಬಿಸಿದರು.
ಬ್ಯಾಡ್ಮಿಂಟನ್‌ನ ರಾಷ್ಟ್ರೀಯಮಟ್ಟದ ತೀರ್ಪುಗಾರರು ಹಾಗೂ ಮಣಿಪಾಲದ ಮಾಧವ ಕೃಪಾ ಶಾಲೆಯ ದೈಹಿಕ ಶಿಕ್ಷಕಿಯಾದ ಶಾಲಿನಿ ಎಸ್. ಮಾತನಾಡುತ್ತಾ, ವಿವಿಧ ಪಂದ್ಯಾಟಗಳನ್ನು ಕೇವಲ ಗೆಲುವನ್ನು ಪಡೆಯಲಿಕ್ಕಷ್ಟೇ ಆಯೋಜಿಸಿರುವುದಿಲ್ಲ. ನೀವು ಈಗಿರುವುದಕ್ಕಿಂತ ಇನ್ನಷ್ಟು ಎತ್ತರಕ್ಕೆ ಕೊಂಡೊಂಯ್ಯುವುದೇ ಕ್ರೀಡಾಕೂಟಗಳ ಆಯೋಜನೆಯ ಧ್ಯೇಯವಾಗಿರುತ್ತದೆ. ನಿಮ್ಮ ಆಟವನ್ನು ಪ್ರೀತಿಯಿಂದ ಆಸ್ವಾದಿಸಿರಿ. ಭೇದವಿಲ್ಲದೆ ಎಲ್ಲಾ ಆಟಗಾರರನ್ನು ಹುರಿದುಂಬಿಸಿರಿ. ಎಂದು ಹಿತ ವಚನಗಳನ್ನು ನುಡಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡೆಯು ಜೀವನಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬ ಪಾಠವನ್ನು ನಮಗೆ ತಿಳಿಸಿಕೊಡುತ್ತದೆ. ಕೊನೆಯ ಫಲಿತಾಂಶ ಏನೇ ಆದರೂ ಬದುಕಿಗೆ ಅಗತ್ಯವಾದ ಉನ್ನತ ಆದರ್ಶಗಳನ್ನು ಕ್ರೀಡೆಯು ನೀಡುತ್ತದೆ. ಗೆಲುವು ಆನಂದ ನೀಡಿದರೆ, ಸೋಲು ತನ್ನ ಮುಂದಿನ ಹೆಜ್ಜೆಗಳ ಅರಿವು ಮೂಡಿಸುತ್ತದೆ. ಎಂದರು.
ಈ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಒಟ್ಟು 15ತಂಡಗಳು, 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಒಟ್ಟು 17 ತಂಡಗಳು, 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಒಟ್ಟು 16 ತಂಡಗಳಂತೆ ಒಟ್ಟು 243 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ಪರ್ಧಾನಂತರ ನಡೆದ ಸಮಾರೋಪ ಸಮಾರಂಭಕ್ಕೆ ಕುಂದಾಪುರದ ನೆಹರು ಪೆವಿಲಿಯನ್‌ನ ಬ್ಯಾಡ್ಮಿಂಟನ್ ತರಬೇತುದಾರರಾದ ರಾಜೇಶ್ ನಾಯರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿ ಶುಭ ಹಾರೈಸಿದರು.
14 ವರ್ಷದೊಳಗಿನ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. 14 ವರ್ಷದೊಳಗಿನ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಕಾರ್ಕಳದ ಶ್ರೀ ರವಿಶಂಕರ ವಿದ್ಯಾಮಂದಿರವು ದ್ವಿತೀಯ ಸ್ಥಾನಕ್ಕೆ ತೃಪಿಪಟ್ಟರೆ, ಮಣಿಪಾಲದ ಮಾಧವ ಕೃಪಾ ಸ್ಕೂಲ್ ಪ್ರಥಮ ಸ್ಥಾನವನ್ನು ಪಡೆಯಿತು. 17 ವರ್ಷದೊಳಗಿನ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನವನ್ನು, ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. 17 ವರ್ಷದೊಳಗಿನ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ದ್ವಿತೀಯ ಸ್ಥಾನವನ್ನು, ಉಡುಪಿಯ ಶಾರದಾ ವಸತಿ ಶಾಲೆಯು ಪ್ರಥಮ ಸ್ಥಾನವನ್ನು ಪಡೆಯಿತು.
14 ವರ್ಷದೊಳಗಿನ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಯಶಸ್ವಿನೀ ಬೆಸ್ಟ್ ಡಿಪೆಂಡರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನ ಜೇಷ್ಮಾ ಬೆಸ್ಟ್ ಸ್ಮ್ಯಾಷರ್ ಪ್ರಶಸ್ತಿಯನ್ನು ಪಡೆದರು. 14 ವರ್ಷದೊಳಗಿನ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಕಾರ್ಕಳದ ಶ್ರೀ ರವಿಶಂಕರ ವಿದ್ಯಾಮಂದಿರದ ಈಶಾನ್ ಹೆಗ್ಡೆ ಬೆಸ್ಟ್ ಡಿಪೆಂಡರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಮಣಿಪಾಲದ ಮಾಧವ ಕೃಪಾ ಶಾಲೆಯ ವೈಭವ್ ಶೆಟ್ಟಿ ಬೆಸ್ಟ್ ಸ್ಮ್ಯಾಷರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. 17 ವರ್ಷದೊಳಗಿನ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಸಾನ್ವೀ ಆಚಾರ್ಯ ಬೆಸ್ಟ್ ಡಿಪೆಂಡರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನ ಸಾಚಿ ಶೆಟ್ಟಿ ಬೆಸ್ಟ್ ಸ್ಮ್ಯಾಷರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. 17 ವರ್ಷದೊಳಗಿನ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಕ್ಷಿತೀಜ್ ಬೆಸ್ಟ್ ಡಿಪೆಂಡರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಉಡುಪಿ ಉಡುಪಿಯ ಶಾರದಾ ವಸತಿ ಶಾಲೆಯ ಹಿತಾರ್ಥ ಬೆಸ್ಟ್ ಸ್ಮ್ಯಾಷರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಉಡುಪಿ ಜಿಲ್ಲೆಯ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.