ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 17 ತಿಂಗಳಲ್ಲಿ ಕುಂದಾಪುರ ತಾಲೂಕಿನಲ್ಲಿ ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಒಟ್ಟು 248 ಕೋಟಿ ರೂಪಾಯಿ ಸರಕಾರದಿಂದ ಬಿಡುಗಡೆಯಾಗಿರುತ್ತದೆ ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಕುಂದಾಪುರ ತಾಲೂಕಿನಲ್ಲಿ 17 ತಿಂಗಳಲ್ಲಿ ಶಕ್ತಿ ಯೋಜನೆಯಡಿ 97,99 , 147 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 33,81,95,617 ರೂಪಾಯಿ ರಿಯಾಯಿತಿ ಪಡೆದಿರುತ್ತಾರೆ. ಗೃಹ ಜ್ಯೋತಿ ಯೋಜನೆಯಡಿ 15 ತಿಂಗಳಲ್ಲಿ ತಿಂಗಳ ಸರಾಸರಿ 63,860 ಫಲಾನುಭವಿಗಳು 41,23,22,559 ರೂಪಾಯಿ ಲಾಭ ಪಡೆದಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯಡಿ 50485 ಫಲಾನುಭವಿಗಳ ಖಾತೆಗೆ ನೇರವಾಗಿ 131,26,10,000 ರೂಪಾಯಿ ಜಮೆಯಾಗಿರುತ್ತದೆ. ಅನ್ನಭಾಗ್ಯ ಯೋಜನೆಯಡಿ 44,010 ಪಡಿತರ ಚೀಟಿಗಳಿಗೆ 40,89,83,280 ರೂಪಾಯಿ ನೇರವಾಗಿ 13 ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಿರುತ್ತದೆ. ಯುವನಿಧಿ ಯೋಜನೆಯಡಿ 614 ಫಲಾನುಭವಿಗಳಿಗೆ ಒಟ್ಟು 1,09,89,000 ರೂಪಾಯಿ ನೇರವಾಗಿ ಖಾತೆಗೆ ಜಮಾ ಆಗಿರುತ್ತದೆ.
ಸಭೆಯಲ್ಲಿ ಸರ್ಕಾರಿ ಬಸ್ಸುಗಳನ್ನು ನಿಗದಿತ ಸಮಯದಲ್ಲಿ ಪರವಾನಿಗೆ ಇರುವ ರೂಟ್ ಗಳಿಗೆ ಬಸ್ಸನ್ನು ಓಡಿಸಬೇಕು ಮತ್ತು ಚಾಲಕ ನಿರ್ವಾಹಕರು ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಹೊಸದಾಗಿ ನಿರ್ಮಾಣ ಆಗಿರುವ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಿಸಿಕೊಡಬೇಕೆಂದು ಸದಸ್ಯರು ಆಗ್ರಹಿಸಿದರು. ಗೃಹಲಕ್ಷ್ಮಿ ಯೋಜನೆಯಡಿ NPCI, ಆಧಾರ್ ಸೀಡ್ ಮ್ಯಾಪಿಂಗ್ ಆಗಿರದ 489 ಫಲಾನುಭವಿಗಳನ್ನು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ
ಸಂಪರ್ಕಿಸಿ ಮುಂದಿನ ಸಭೆಯೊಳಗೆ ಅವರಿಗೆ ಯೋಜನೆಯ ಲಾಭ ದೊರಕಿಸಿಕೊಡಬೇಕೆಂದು ಸದಸ್ಯರು ಆಗ್ರಹಿಸಿದರು. ಯುವನಿಧಿ ಯೋಜನೆಯ ನೋಂದಣಿ ಕಡಿಮೆ ಇರುವುದರಿಂದ ಈ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕೆಂದು ಸದಸ್ಯರು ಸೂಚಿಸಿದರು.
ಈ ವೇಳೆ ಸದಸ್ಯರಾದ ವಸುಂಧರ ಹೆಗ್ಡೆ ಹೆಂಗವಳ್ಳಿ, ವಾಣಿ ಆರ್. ಶೆಟ್ಟಿ ಮೊಳಹಳ್ಳಿ, ನಾರಾಯಣ ಆಚಾರ್ ಕೋಣಿ, ಅಭಿಜಿತ್ ಪೂಜಾರಿ ಹೇರಿಕುದ್ರು, ಮಂಜು ಕೊಠಾರಿ ಕೆರಾಡಿ, ಗಣೇಶ್ ಕುಂದಾಪುರ, ಆಶಾ ಕರ್ವೆಲ್ಲೋ ಚರ್ಚ್ ರೋಡ್ ಕುಂದಾಪುರ, ಸವಿತಾ ಪೂಜಾರಿ ಚಿತ್ತೂರು, ಜಹೀರ್ ಅಹಮದ್ ಗಂಗೊಳ್ಳಿ, ಚಂದ್ರ ಕಾಂಚನ್ ಜನ್ನಾಡಿ, ಅರುಣ್ ಹಕ್ಲಾಡಿ ಮತ್ತು ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ ಸ್ವಾಗತಿಸಿ, ವ್ಯವಸ್ಥಾಪಕ ರಾಮಚಂದ್ರಮಯ್ಯ ಅವರು ವಂದಿಸಿದರು.