Kundapra.com ಕುಂದಾಪ್ರ ಡಾಟ್ ಕಾಂ

ವಿಕಲಚೇತನರ ದಿನಾಚರಣೆಗೆ ಅಗತ್ಯವಿರುವ ವ್ಯವಸ್ಥಿತ ಸಿದ್ಧತೆ ಮಾಡಿಕೊಳ್ಳಿ: ಅಪರ ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾಮಟ್ಟದಲ್ಲಿ ಡಿಸೆಂಬರ್ 3 ರಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯವಿರುವ ವ್ಯವಸ್ಥಿತ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು.

ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ವಿಕಲಚೇತನರ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾಮಟ್ಟದಲ್ಲಿ ಡಿಸೆಂಬರ್ 3 ರಂದು ಬೆಳಗ್ಗೆ 10 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ ಎಂಬ ಘೋಷವಾಕ್ಯದೊಂದಿಗೆ ಪ್ರಸಕ್ತ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿಶೇಷ ಮಕ್ಕಳನ್ನು ಹಾಗೂ ವ್ಯಕ್ತಿಗಳನ್ನು ಗೌರವಿಸಿ, ಸನ್ಮಾನಿಸಲಾಗುವುದು ಹಾಗೂ ವಿಕಲಚೇತನರಿಗಾಗಿ ಆಯೋಜಿಸಲಾದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಜಿಲ್ಲಾ ಮಟ್ಟದಲ್ಲಿ ವಿಕಲಚೇತನರ ಕ್ರೀಡಾ ಸ್ಪರ್ಧೆಗಳನ್ನು ನವೆಂಬರ್ 30 ರ ಒಳಗಾಗಿ ಆಯೋಜಿಸಿ, ಸ್ಪರ್ಧಾ ವಿಜೇತರ ವಿವರಗಳನ್ನು ನೀಡಬೇಕು ಎಂದ ಅವರು, ನವೆಂಬರ್ 25 ರಿಂದ ಡಿಸೆಂಬರ್ 01 ರ ವರೆಗೆ 21 ಬಗೆಯ ಅಂಗವಿಕಲತೆಯೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಡಿ.ಡಿ.ಆರ್.ಸಿ ಕೇಂದ್ರ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆ ಹಾಗೂ ಎಂ.ಆರ್.ಡಬ್ಲೂö್ಯ ರವರ ಸಹಯೋಗದೊಂದಿಗೆ ವಿಕಲಚೇತನರ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಈ ವೇಳೆ ವಿಶೇಷಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಹೆಚ್ಚಿನ ಅರಿವು ಮೂಡಿಸುವಲ್ಲಿ ವಿಶೇಷ ಕ್ರಮ ವಹಿಸಬೇಕು ಎಂದರು.

ವಿಕಲಚೇತನರ ದಿನಾಚರಣೆಯ ದಿನದಂದು ಬೆಳಗ್ಗೆ 9 ರಿಂದ ವಿಶೇಷ ಶಾಲಾ ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಸಮಾರಂಭದ ದಿನ ವಿಶೇಷ ಮಕ್ಕಳನ್ನು ಕರೆತರುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳು ಕ್ರಮವಹಿಸಬೇಕು ಎಂದ ಅವರು, ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಹ ಆಯೋಜಿಸಬೇಕು ಎಂದರು.

ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ, ಗಣ್ಯರನ್ನು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ವಿಶೇಷಚೇತನರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ವ್ಯಾಪಕ ಪ್ರಚಾರ ನೀಡುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜೈ ವಿಠ್ಠಲ, ವಿ.ಹಿ.ನಾ.ಸ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್, ವಿಕಲಚೇತನರ ಸ್ವಯಂಸೇವಾ ಸಂಸ್ಥೆಗಳ ಹಾಗೂ ಪುನರ್ವಸತಿ ಕೇಂದ್ರಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version