Kundapra.com ಕುಂದಾಪ್ರ ಡಾಟ್ ಕಾಂ

ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌: 19ನೇ ವರ್ಷದ ವಾರ್ಷಿಕೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿಗಳಲ್ಲಿ ಗುರಿ, ತಾಳ್ಮೆ ಹಾಗೂ ನಿರಂತರ ಪರಿಶ್ರಮ ಇದ್ದಲ್ಲಿ ಮಾತ್ರ ಸರಿಯಾದ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ಟೊಯೊಟೊ ಕಿರ್ಲೋಸ್ಕರ್ ಮೋಟಾರ್‌ನ ಉಪ ಪ್ರಧಾನ ವ್ಯವಸ್ಥಾಪಕ ಡಾ. ದೀಪಕ್ ಶೆಟ್ಟಿ ಬಾರ್ಕೂರು ನುಡಿದರು.

ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 19ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯರು ಹಾಗೂ ತಮ್ಮೂರಿನ ಮೇಲೆ ಇರಿಸಿಕೊಳ್ಳುವ ಗೌರವ, ನಂಬಿಕೆ ಮತ್ತು ಅರಿವು ಭವಿಷ್ಯದ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಮಕ್ಕಳ ಜೀವನವನ್ನು ವ್ಯವಸ್ಥಿತವಾಗಿ ರೂಪಿಸುವ ಸಂಪೂರ್ಣ ಜವಾಬ್ದಾರಿ ಪೋಷಕರದ್ದಾಗಿರುವುದರಿಂದಾಗಿ ಅದನ್ನು ಅರ್ಥೈಸಿಕೊಂಡು ನಡೆಯಬೇಕು. ಗುರು ಎನ್ನುವ ಸ್ಥಾನವೇ ದೊಡ್ಡದು. ಸಮಾಜದಲ್ಲಿ ಮಕ್ಕಳನ್ನು ತಿದ್ದುವ ಮೂಲಕ ಒಂದು ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಗುರುಗಳ ಪಾತ್ರ ಹಿರಿದಾಗಿದೆ. ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಕೊಡುವುದೇ ಗುರುವಿನ ಜವಾಬ್ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಅನುಪಮ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯ ಅಭ್ಯಾಸಗಳ ಜೊತೆಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವರ್ಧನೆಗೆ ಪೂರಕವಾಗಿರುವ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದೆ. ಈನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ನೀಡುತ್ತಿದ್ದೇವೆ. ಸಂಸ್ಥಾಪಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಕನಸಿನಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಲು ಆದ್ಯತೆ ನೀಡಲಾಗಿದೆ ಎಂದರು.

ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಟ್ರಸ್ಟಿಗಳಾದ ಬಾಂಡ್ಯ ಸುಬ್ಬಣ್ಣ ಶೆಟ್ಟಿ, ರಾಮ್‌ಕಿಶನ್ ಹೆಗ್ಡೆ, ಆಡಳಿತ ಮಂಡಳಿ ಸದಸ್ಯ ರಾಜೇಶ್ ಕೆ.ಸಿ ಇದ್ದರು.

ಬಹುಮುಖ ವಿಷಯಗಳ ಶಕ್ತಿಯನ್ನು ಗ್ರಹಿಸುವ ವಿಭಾಗದಿಂದ ಕರ್ನಾಟಕ ಸಾಧಕರ ದಾಖಲೆಗಳ ಪುಸ್ತಕ 2024 ಕ್ಕೆ ಸೇರ್ಪಡೆಗೊಂಡಿರುವ ಮಾಂಟೆಸೆರಿ ವಿಭಾಗದ ಬೇಬಿ, ಆಧ್ಯಾ ಹಾಗೂ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾರ್ಷಿಕ ಸಂಭ್ರಮದ ಅಂಗವಾಗಿ ನಡೆದ ‘ ಕಲಾ ವೈಭೋಗಂ ‘ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೈವಿದ್ಯಮಯ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು.

ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿಯಾ ಸ್ವಾಗತಿಸಿದರು, ರನೀಮ್ ಜೋಹರಾ ಪರಿಚಯಿಸಿದರು, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಸುನೀಲ್ ಪ್ಯಾಟ್ರಿಕ್ ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅನನಾಶ್ ಆಚಾರ್ಯ ಶೈಕ್ಷಣಿಕ ವರದಿ ಮಂಡಿಸಿದರು, ಶಿಕ್ಷಕಿ ಸುಶ್ಮಾ ಮುರಳಿ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು, ವಿದ್ಯಾರ್ಥಿ ಮುಖಂಡ ಭರತ್ ವಂದಿಸಿದರು, ವಿದ್ಯಾರ್ಥಿಗಳಾದ ಅಂಜನ್, ಅವನಿ, ಭಾವದ್ರತ, ಹರ್ಷಿಣಿ, ಅದಿತಿ, ಪ್ರಥಮ್‌ಕುಮಾರ, ಸಾನ್ವಿ ಪೈ, ಹಿತೈಷಿ ನಿರೂಪಿಸಿದರು.

Exit mobile version