Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಿದ್ಧಿ ಸೌರಭ-2024 ವಾರ್ಷಿಕೋತ್ಸವ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ಪ್ರೌಢಶಾಲಾ ವಿಭಾಗದ ’ಸಿದ್ಧಿಸೌರಭ’ ವಾರ್ಷಿಕೋತ್ಸವ ಸಮಾರಂಭವು ಬಹಳ ಅದ್ಧೂರಿಯಾಗಿ ಜರುಗಿತು.

ಈ ಕಾರ್ಯಕ್ರಮಕ್ಕೆ  ತುರುವೆಕೆರೆ ಮಾದಿಹಳ್ಳಿಯ ರಾಮಕೃಷ್ಣ ಮಠದ ಶ್ರೀ ಧರ್ಮಾವೃತಾನಂದ ಸ್ವಾಮಿಗಳು ಮತ್ತು ದಾವಣಗೆರೆಯ ಶೈಕ್ಷಣಿಕ ಸಲಹೆಗಾರರೂ ಹಾಗೂ ತರಬೇತುದಾರರಾದ ಜಗನ್ನಾಥ ನಾಡಿಗೇರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ಹಲವಾರು ಸಂಸ್ಥೆಗಳನ್ನು ದಕ್ಷವಾಗಿ ಮುನ್ನೆಡೆಸಿದ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಮಾಜಿ ಉಪಾಧ್ಯಕ್ಷರಾಗಿದ್ದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಅಭಿವೃದ್ಧಿಗಾಗಿ ಬಹುವಾಗಿ ಶ್ರಮಿಸಿದ  ’ಸ್ವಪ್ನ ಶಿಲ್ಪಿ’ಡಾ. ಹೆಚ್ ಶಾಂತಾರಾಮರನ್ನು ಸಂಸ್ಥೆಯ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎನ್. ಪಿ. ನಾರಾಯಣ ಶೆಟ್ಟಿ ಅವರು ಎಚ್ ಶಾಂತಾರಾಮರ ಬಗ್ಗೆ ತಿಳಿಸುತ್ತಾ, ಸಾಗರದಂತಹ ವ್ಯಕ್ತಿತ್ವವುಳ್ಳ ನಡೆದಾಡುವ ವಿಶ್ವಗ್ರಂಥ ಎಚ್. ಶಾಂತಾರಾಮರು. ಇವರು ಹಟ್ಟಿಅಂಗಡಿಯನ್ನು ಬಹಳವಾಗಿ ಪ್ರೀತಿಸುತ್ತಾರೆ. ಸಾಹಿತ್ಯಕ್ಕೆ ಬಹಳ ಕೊಡುಗೆಗಳನ್ನಿತ್ತವರು. ಹತ್ತಾರು ಸಂಸ್ಘಸಂಸ್ಥೆಗಳನ್ನು ದಕ್ಷವಾಗಿ ಮುನ್ನಡೆಸಿದವರು. ಈ ವಿದ್ಯಾಸಂಸ್ಥೆಯ ಹುಟ್ಟಿಗೆ ರಾಮಚಂದ್ರ ಭಟ್ಟರಿಗೆ ಸಹಾಯಕರಾಗಿ ನಿಂತು ಸಲಹೆಗಳನ್ನಿತ್ತವರು. ನೂರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಬೇಕು, ಹಳ್ಳಿಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಕನಸು ಹೊತ್ತವರು.  ಶಾಲೆಯ ಎಲ್ಲಾ ಸಮಸ್ಯೆಗಳಲ್ಲೂ ಜೊತೆಯಾಗಿ ನಿಂತವರು. ಇವರು ನೀಡಿರುವ ಕೊಡುಗೆಗಳಿಗೆ ಸಂಸ್ಥೆಯು ಎಂದಿಗೂ ಆಭಾರಿಯಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಧರ್ಮಾವೃತಾನಂದ ಸ್ವಾಮಿಗಳು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ತಂದೆ ತಾಯಿಯರು ತಮ್ಮ ಮಕ್ಕಳು ಕಷ್ಟಪಡಬಾರದೆಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಅವರು ಸವಾಲುಗಳನ್ನು ಎದುರಿಸಬೇಕೆಂದು ಬಯಸುತ್ತಾರೆ. ಪುಸ್ತಕದ ಜ್ಞಾನದೊಂದಿಗೆ ಆಧ್ಯಾತ್ಮಜ್ಞಾನವೂ ಬೇಕು. ಇವುಗಳೊಂದಿಗೆ ನೈತಿಕ ಶಿಕ್ಷಣವೂ ಮುಖ್ಯ. ವಸತಿಶಾಲೆಯ ಮಕ್ಕಳು ಮನೆಯಲ್ಲಿರುವ ಸಂದರ್ಭದಲ್ಲಿಯೂ ಪೋಷಕರು ಶಾಲೆಯಲ್ಲಿನ ದಿನಚರಿ ಮುಂದುವರಿಸುವಂತೆ ಸೂಚಿಸಬೇಕು. ಮಕ್ಕಳಿಗಾಗಿ ಆಸ್ತಿ ಕೂಡಿಡುವ ಬದಲು ಉತ್ತಮ ಸಂಸ್ಕಾರಗಳನ್ನು ಕೊಡಬೇಕು. ವಿದ್ಯೆ ಕಲಿಕೆ ಎಂಬುದು ತಪಸ್ಸಿಗೆ ಸಮಾನವಾದುದು. ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕಾದಾಗ ಅಹಂಕಾರ ಬುದ್ಧಿಯನ್ನು ಆವರಿಸಿಕೊಳ್ಳುತ್ತದೆ. ಅಹಂಕಾರ ಮಗುವಿನ ವರ್ಚಸ್ಸನ್ನು ಹಾನಿಗೊಳಿಸುತ್ತದೆ. ಅದನ್ನು ತಿಳಿಹೇಳಿ ಬೆಳೆಸುವಲ್ಲಿ ತಂದೆ-ತಾಯಿ-ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಮಗುವಿಗೆ ಸ್ವಾತಂತ್ರ್ಯ ನೀಡಿ ಬೆಳೆಸಬೇಕು ಮತ್ತು ಅವರ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಜಗನ್ನಾಥ ನಾಡಿಗೇರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಮಕ್ಕಳು ತಂದೆ ತಾಯಿಯರ ಮಾತನ್ನು ಪಾಲಿಸಿ, ಗೌರವಿಸಬೇಕು. ಸಂಸ್ಕಾರಯುಕ್ತ ವಾತಾವರಣ ಈ ಶಾಲೆಯಲ್ಲಿದೆ. ಇದೊಂದು ಜ್ಞಾನದೇಗುಲವಿದಾಗಿದ್ದು ಭಾರತೀಯ ಸಂಸ್ಕೃತಿ ಇಲ್ಲಿ ಎಲ್ಲಾ ದಿಕ್ಕುಗಳಲ್ಲಿಯೂ ಗೋಚರಿಸುತ್ತಿದೆ. ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಸಾಧನೆಗೈಯ್ಯುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರದೇನೆ ಉತ್ತಮ ಫಲಿತಾಂಶವೆಂಬ ಹೂವು ಘಮಘಮಿಸುತ್ತಿರುವುದು ಶಾಲೆಯ ಔನ್ನತ್ಯದ ಸಂಕೇತ ಎಂದು ನುಡಿದರು.

ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರೂ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ಶರಣ ಕುಮಾರ ವಾರ್ಷಿಕ ವರದಿಯನ್ನು ವಾಚಿಸಿ,  ಸತತ 22 ವರ್ಷಗಳಿಂದ ಶಾಲೆ ಶೇಕಡಾ ನೂರು ಫಲಿತಾಂಶವನ್ನು ಪಡೆಯುತ್ತಿದೆ. ಉತ್ತಮಗುಣಮಟ್ತದ ಶಿಕ್ಷಣ ನಮ್ಮ ಆಯ್ಕೆಯಾಗಿದ್ದು, ವಿದ್ಯಾರ್ಥಿಯ ಸರ್ವತೋಮುಖವಾದ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಎನ್ನುತ್ತಾ ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಕಳೆದ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಶ್ರೇಯೋಭಿವೃದ್ಧಿಗಾಗಿ ಬಹುವಾಗಿ ಶ್ರಮಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿದ್ದ ದಿ. ಎಲ್ ಟಿ ತಿಮ್ಮಪ್ಪ ಹೆಗಡೆಯವರ ಸ್ಮರಣಾರ್ಥ ’ಜ್ಞಾನ ನಿಕೇತನ’ ಎಂಬ ಸಭಾ ಕೊಠಡಿಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ರಾಮಕೃಷ್ಣ ಮಠದ ಶ್ರೀ ಶ್ರೀ ಧರ್ಮಾವೃತಾನಂದ ಸ್ವಾಮಿಗಳು ಮತ್ತು ಜಗನ್ನಾಥ ನಾಡಿಗೇರರು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪ, ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಈ ಸಂಸ್ಥೆಯು ವೇದಮೂರ್ತಿ ಹೆಚ್ ರಾಮಚಂದ್ರ ಭಟ್, ಎಲ್ ಟಿ ತಿಮ್ಮಪ್ಪ ಹೆಗಡೆ ಮತ್ತು ಹಟ್ಟಿಯಂಗಡಿ ಶಾಂತರಾಮರ ಸಂಘಟಿತ ಪರಿಶ್ರಮದಿಂದ ಮೈದಳೆದಿದ್ದು, ಯುವ ಜನತೆಯ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಮುನ್ನೆಡೆಯುತ್ತಿದೆ. ಸಂಸ್ಥೆಯ ಎಲ್ಲಾ ಕಾರ್ಯಕಲಾಪಗಳು ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಪೂರಕವಾಗಿದೆ. ಪೋಷಕರು ಮುಂದಿನ ದಿನಗಳಲ್ಲಿಯೂ ನಮ್ಮ ಜೊತೆಗಿದ್ದು, ಸಹಕರಿಸಬೇಕು ಎಂದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ  ವೇದಮೂರ್ತಿ ಹೆಚ್ ಬಾಲಚಂದ್ರ ಭಟ್, ಟ್ರಸ್ಟಿಗಳಾದ ಹೆಚ್ ಗಣೇಶ್ ಕಾಮತ್, ಎಸ್ ನಾರಾಯಣ್ ರಾವ್,  ಡಾ. ಎನ್ ಪಿ ನಾರಾಯಣ ಶೆಟ್ಟಿ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ವಿದ್ಯಾರ್ಥಿ ನಾಯಕ ತೇಜಸ್ ಎಲ್ ಎಸ್, ವಿದ್ಯಾರ್ಥಿ ನಾಯಕಿ ಭಕ್ತಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಟ್ಟಿಯಂಗಡಿಯ ರಮಾದೇವಿ ಭಟ್, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಸರ್ವ ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಹಶಿಕ್ಷಕಿ ವಿನುತಾ ಕಾಮತ್ ಸ್ವಾಗತಿಸಿದರು. ಶಿಕ್ಷಕಿಯರಾದ ವಿದ್ಯಾ ಅಮೀನ್ ಮತ್ತು ಸಂಗೀತಾ ಕೆ ಆರ್ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ನಾಯಕಿ ಭಕ್ತಿ ರಾವ್ ವಂದಿಸಿದರು.

ಸಂಜೆ ಪ್ರೌಢ ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ, ನೃತ್ಯ ರೂಪಕ, ನಾಟಕ, ಪ್ರಹಸನಗಳು, ನೃತ್ಯಗಳು, ಮೈಮ್ ಶೋ ಮತ್ತು ಪಿರಾಮಿಡ್ ಶೋಗಳು ವೀಕ್ಷಕರ ಮನಸೂರೆಗೊಂಡವು. 10ನೇ ತರಗತಿಯ ವಿದ್ಯಾರ್ಥಿಗಳಾದ ಸುಪ್ರೀತ್ ಇಂಡಿ, ಸಾತ್ವಿಕ್ ಜಿ ವಿ, ಧನುಷ್ ಎಸ್, ವಿಕಾಸ್ ಹೆಚ್ ವಿದ್ಯಾರ್ಥಿನಿಯರಾದ ಸಿಂಚನಾ ಎ ಪಿ, ಅನುಶ್ರೀ, ಸಿಂಚನಾ ಬಿ ಹೆಚ್ ಮತ್ತು ಸಿಂಚನಾ ಪಿ ಎನ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version