Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ: ಈಜಾಡಲು ತೆರಳಿದ್ದ ಮೂವರು ಸಹೋದರರು ಸಮುದ್ರಪಾಲು, ಓರ್ವನ ರಕ್ಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.07:
ಇಲ್ಲಿನ ಕೋಡಿ ಬೀಚಿನಲ್ಲಿ ಈಜಾಡಲು ತೆರಳಿದ್ದ ಮೂವರು ಸಹೋದರರು ಸಮುದ್ರಪಾಲಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ, ಗಂಭೀರ ಸ್ಥಿತಿಯಲ್ಲಿದ್ದ ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಸಹೋದರರು ಸಂಜೆ 6 ಗಂಟೆ ಸುಮಾರಿಗೆ ಕೊಡಿಯ ಸಮುದ್ರದಲ್ಲಿ ಈಜಾಡಲು ತೆರಳಿದ್ದು ಈ ವೇಳೆ ಅವಘಡ ನಡೆದಿದೆ. ಅಂಪಾರು ಗ್ರಾಮದ ಮೂಡುಬಗೆಯ ನಿವಾಸಿ ದಾಮೋದ‌ರ್ ಪ್ರಭು ಎಂಬುವರ ಪುತ್ರ ಧನರಾಜ್ (23) ಸಾವನ್ನಪ್ಪಿದ್ದರೆ, ಅವರ ಇನ್ನೊರ್ವ ಪುತ್ರ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದಾಮೋದರ್ ಅವರ ಸಹೋದರನ ಪುತ್ರ ದರ್ಶನ್ (18) ಸಮುದ್ರ ಪಾಲಾಗಿದ್ದು, ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್ ಎನ್‌ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಅವಘಡ ಗಮನಕ್ಕೆ ಬರುತ್ತಿದ್ದಂತೆ ಬೆಂಗಳೂರಿನ ಪ್ರವಾಸಿಗರು ತಕ್ಷಣ ಸಮುದ್ರಕ್ಕೆ ಹಾರಿ ರಕ್ಷಣೆಗೆ ಮುಂದಾದರು. ಬಳಿಕ ಸ್ಥಳೀಯರು ಇಬ್ಬರನ್ನು ಕುಂದಾಪುರದ ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದ್ದಾರೆ. ದರ್ಶನ ಪತ್ತೆಗಾಗಿ ಈಜು ತಜ್ಞರು ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version