Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

oplus_2

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿಭಿನ್ನವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕಲಿಯಲು ಮನಸ್ಸಿನ ಹಸಿವಿರಬೇಕು, ಕಲಿಕಬೇಕೆಂಬ ತುಡಿತವಿರಬೇಕು. ಕಲಿಕೆಯಲ್ಲಿ ಫೋಕಸ್ ಮಾಡಬೇಕು. ಕಷ್ಟಪಟ್ಟಾದರೂ ಕಲಿಕೆಯಲ್ಲಿ ಮನಸ್ಸು ನೀಡಬೇಕು. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಬರುವ ಪ್ರತಿಯೊಂದು ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಸಾಧಿಸುವ ಛಲವನ್ನು ಹೊಂದಬೇಕು. ವಿದ್ಯೆ ನಮ್ಮ ಸಮಸ್ಯೆಗಳಿಗೆ ಪರಿಹಾರವಲ್ಲ. ಉನ್ನತ ಶಿಕ್ಷಣ ಜೀವನೋಪಾಯವನ್ನು ಕಲಿಸಿದರೆ, ಬಾಲ್ಯದಲ್ಲಿ ದೊರೆಯುವ ಶಿಕ್ಷಣ ನಾವು ಹೇಗೆ ಜೀವಿಸಬಹುದು ಎಂಬುದನ್ನು ಕಲಿಸುತ್ತದೆ ಎಂದು ಇಸ್ರೋದ ಗ್ರೂಪ್ ಡೈರೆಕ್ಟರ್ ಡಾ. ನಾಗೇಶ ಎಸ್.ಕೆ. ಹೇಳಿದರು.

ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಶುಕ್ರವಾರ ಜಿ. ಎಸ್. ವಿ. ಎಸ್. ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಿ. ಎಸ್. ವಿ. ಎಸ್. ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಜಿ. ವೆಂಕಟೇಶ ಬಿ. ಶೆಣೈ ಸ್ವಸ್ತಿವಾಚನಗೈದರು.  ಇದೇ ಸಂದರ್ಭ 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಹರ್ಷಿತಾ ಎಸ್. ಪೂಜಾರಿ ಅವರಿಗೆ ದಿ. ಬಾಂಡ್ಯ ರವಿ ಪೈ ಮತ್ತು ಬಾಂಡ್ಯ ಸುಧಾಕರ ಪೈ ಸಹೋದರರು ಕೊಡ ಮಾಡಿದ ಚಿನ್ನದ ಪದಕ ಹಾಗೂ ನಗದು ನೀಡಿ ಸನ್ಮಾನಿಸಲಾಯಿತು.

ಕ್ರೀಡೆಯಲ್ಲಿ ಸಾಧನೆಗೈದ ಸಹನಾ ಖಾರ್ವಿ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸ್ಪರ್ಧೆಗಳಲ್ಲಿ ಮತ್ತು ಪಠ್ಯ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕ ಎನ್. ಸದಾಶಿವ ನಾಯಕ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ. ವರದಿ ವಾಚಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ದೀಕ್ಷಿತ್ ಮೇಸ್ತ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಕ್ಷಮಾ ಆಚಾರ್ಯ ಮತ್ತು ವೈಷ್ಣವಿ ಅತಿಥಿಗಳನ್ನು ಪರಿಚಯಿಸಿದರು. ಶ್ರಾವ್ಯ, ಶ್ರೀರಕ್ಷಾ ಶೆಣೈ, ಸಂಜನಾ, ಪ್ರಜ್ಞಾ, ಅಂಕಿತಾ, ಪ್ರಥಮ್, ಗುರುಚರಣ್ ಮತ್ತು ಭಾರತಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಗೋಪಾಲ ದೇವಾಡಿಗ ವಂದಿಸಿದರು.

Exit mobile version