Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಹಳೆ ವಿದ್ಯಾರ್ಥಿ ಸಂಘದ 55ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ವಿದ್ಯೆ ಕಲಿಸಿದ ಗುರು ಮತ್ತು ಕಲಿತ ಶಾಲೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿಯೊಂದು ಶಾಲೆಗೆ ಹಳೆ ವಿದ್ಯಾರ್ಥಿಗಳು ಶಾಲೆಯ ಆಧಾರ ಸ್ತಂಭಗಳಾಗಿದ್ದು, ಶಾಲೆಯ ಮೇಲೆ ಪ್ರೀತಿ, ವಿಶ್ವಾಸವನ್ನಿಟ್ಟುಕೊಂಡು ತಮ್ಮಿಂದಾಗುವ ಸಹಕಾರ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕಿದೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಮಂದಿ ದೇಶ ವಿದೇಶಗಳಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಂಡು ಊರಿಗೆ ಹಾಗೂ ಶಾಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಈ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಪಾಠೇತರ ಚಟುವಟಿಕೆಗಳಲ್ಲೂ ಸಾಧನೆಗೈಯುತ್ತಿರುವುದು ಶ್ಲಾಘನೀಯ ಎಂದು ಕುಂದಾಪುರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಾಬಣ್ಣ ಪೂಜಾರಿ ಹೇಳಿದರು.

ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಶಾಂತೇರಿ ಬಾ ರಂಗ ಮಂಟಪದಲ್ಲಿ ಭಾನುವಾರ ಜರಗಿದ ಗಂಗೊಳ್ಳಿಯ ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ 55ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಗಂಗೊಳ್ಳಿ ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಸದಸ್ಯ ಕೆ.ರಾಮನಾಥ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ತ್ರಾಸಿಯ ಸೌಪರ್ಣಿಕ ವಿವಿಧೋದ್ದೇಶ ಮಹಿಳಾ ಸಹಕಾರಿ ಸಂಘದ ನಿರ್ದೇಶಕಿ ಪ್ರಿಯದರ್ಶಿನಿ ದೇವಾಡಿಗ ಮತ್ತು ಸಾಫ್ಟವೇರ್ ಇಂಜಿನಿಯರ್ ಗುರುಪ್ರಿತ್ ಕರ್ಣಿಕ್ ಶುಭ ಹಾರೈಸಿದರು. ಇದೇ ಸಂದರ್ಭ ನಿವೃತ್ತ ಉಪನ್ಯಾಸಕ ಎಚ್.ಭಾಸ್ಕರ ಶೆಟ್ಟಿ ಮತ್ತು ನಿವೃತ್ತ ಉಪಪ್ರಾಂಶುಪಾಲ ಉಮೇಶ್ ಕರ್ಣಿಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಹರ್ಷಿತಾ ಎಸ್. ಪೂಜಾರಿ, ನೇಹಾ ಎಸ್.ಕೊಡೇರಿ, ಇಂಚರ ಆರ್. ದೇವಾಡಿಗ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ದೀಕ್ಷಾ ವಿ. ಕಾಮತ್ ಅವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಮಿಥುನ್ ಎಂ.ಡಿ. ಬಿಜೂರು ಸ್ವಾಗತಿಸಿದರು. ಖಜಾಂಚಿ ಸುದನೇಶ ಶ್ಯಾನುಭಾಗ್ ವರದಿ ವಾಚಿಸಿದರು. ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ಪ್ರಕಾಶ ಶೆಣೈ, ದೀಪಿಕಾ ಶ್ಯಾನುಭಾಗ್, ಮಮತಾ ಪೂಜಾರಿ ಮತ್ತು ಸಕು ಉದಯ ಸನ್ಮಾನಿತರನ್ನು ಪರಿಚಯಿಸಿದರು. ನಾಗರಾಜ ಕಲೈಕಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭಾಸ್ಕರ ಎಚ್.ಜಿ. ವಂದಿಸಿದರು.

ಪೋಟೋ ಪೈಲ್ ನೇಮ್ : ೧೬ಜಿಎಎನ್೨ (ಗಂಗೊಳ್ಳಿಯ ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ೫೪ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು)

Exit mobile version