ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಾಣಿಜ್ಯೀಕರಣದತ್ತ ಸಾಗುತ್ತಿರುವ ಶಿಕ್ಷಣ ಸಂಸ್ಥೆಗಳ ನಡುವೆ ಖಂಬದಕೋಣೆಯ ಆರ್. ಕೆ. ಸಂಜೀವ್ ರಾವ್ ಸ್ಮಾರಕ ದತ್ತಿನಿಧಿ ನಾಗೂರಿನಲ್ಲಿ ನಡೆಸುತ್ತಿರುವ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯು ಶೈಕ್ಷಣಿಕ ಮೌಲ್ಯಗಳಿಗೆ ಬದ್ಧವಾಗಿ ಭಿನ್ನತೆ ಮೆರೆಯುತ್ತಿದೆ. ಜನರ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ರಿ. ಆಗಿರುವ ಡಾ. ನಾರಾಯಣ ಶೆಟ್ಟಿ ಹೇಳಿದರು.
ಅವರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮೂರನೆಯ ದಿನ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಪಠ್ಯಾಧರಿತ ಪರೀಕ್ಷೆಗಳ ಅಂಕಗಳೇ ಅವರ ಸಾಧನೆಯ ಮಾನದಂಡವಲ್ಲ. ಸಹಪಠ್ಯ ವಿಷಯಗಳಲ್ಲಿನ ಸಾಧನೆಯೂ ಪರಿಗಣನೆಗೆ ಬರಬೇಕು. ವಿದ್ಯಾರ್ಥಿಗಳ ನಾಗರಿಕ ವರ್ತನೆಗೆ ಆದ್ಯತೆ ದೊರೆಯಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಇಲ್ಲಿ ಕಲಿತ ತಮ್ಮ ಪುತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕದೊಂದಿಗೆ ತೇರ್ಗಡೆಯಾದುದನ್ನು ಉದಾಹರಿಸಿದರು.
ಸಂಜೀವ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಸಂಜೀತ್ ಪ್ರಕಾಶ್ ರಾವ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಶಾಲಾ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಸತ್ಯ ಆರ್. ವೇದಿಕೆಯ ವರದಿಯನ್ನು ಮಂಡಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಮತ್ತು ಲೇಖಕಿ ಉಪ್ಪುಂದ ವರಮಹಾಲಕ್ಷ್ಮೀ ಹೊಳ್ಳ ಅವರಿಗೆ ಸಂಸ್ಥಾಪಕರ ದಿನದ ಗೌರವಾರ್ಪಣೆ ನಡೆಯಿತು. ಕಲಾ ಕೇಂದ್ರದ ಪರವಾಗಿ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸನ್ಮಾನ ಸ್ವೀಕರಿಸಿದರು.
ಶಿಕ್ಷಕ ರಾಜೇಶ್ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರೇಯಾ ಶೆಟ್ಟಿ, ಗೌತಮಿ, ಸ್ಪೂರ್ತಿ ನಿರೂಪಿಸಿದರು. ಆಡಳಿತ ಮಂಡಳಿಯ ಡಾ. ಅಶೋಕ ಕುಂದಾಪುರ, ಪ್ರಮೀಳಾ ಕುಂದಾಪುರ, ಶರ್ಮಿಳಾ ರಾವ್, ಸಹಾಯಕ ಮುಖ್ಯೋಪಾಧ್ಯಾಯಿನಿ ಜ್ಯೋತಿ ಎಸ್. ಮಯ್ಯ, ಸಲಹೆಗಾರ ಎಸ್. ಜನಾರ್ದನ ಮರವಂತೆ, ವಿದ್ಯಾರ್ಥಿನಾಯಕಿ ಫಲಾಕ್ ಅರಾ ಇದ್ದರು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸ್ಪರ್ಧಾವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಶನಿವಾರ ಮತ್ತು ಭಾನುವಾರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ, ಮನೋರಂಜನಾ ಪ್ರದರ್ಶನಗಳು ನಡೆದವು.