Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕಾರ್ಯಾಚರಣೆಗೆ ತೆರಳಿದ್ದ ಸಿಐಡಿ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಹಲ್ಲೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಅಂಬರ್ ಗ್ರೀಸ್ ಕಳ್ಳ ಸಾಗಾಣಿಕೆಯ ಮಾಹಿತಿ ಆಧರಿಸಿ ಕೋಡಿ ಗ್ರಾಮದ ಮಧ್ಯ ಕೋಡಿಗೆ ಮಪ್ತಿಯಲ್ಲಿ ತೆರಳಿದ್ದ ಸಿಐಡಿ ಅರಣ್ಯ ವಿಭಾಗದ ಅಧಿಕಾರಿಗಳ ಮೇಲೆ ತಪ್ಪು ಗ್ರಹಿಕೆಯಿಂದ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಅಧಿಕಾರಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳು ಗುರುತು ಪರಿಚಯ ಹೇಳಿಕೊಳ್ಳದೇ ವಯೋವೃದ್ಧ ವ್ಯಕ್ತಿಗೆ ಗನ್‌ ತೋರಿಸಿರುವುದು ಸಂಘರ್ಷಕ್ಕೆ ಕಾರಣವಾಗಿದ್ದು, ಸ್ಥಳೀಯರು ಆಕ್ರೋಶಗೊಂಡು ಮುಗಿಬಿದ್ದು ತಳ್ಳಾಟ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನ 2:30ರ ಸಮಾರಿಗೆ ಎನ್‌.ಎನ್‌.ಎಂ. ಸೌಹಾರ್ದ ಭವನದ ಎದುರಿನ ಐಸ್‌ಕ್ರೀಮ್‌ ಅಂಗಡಿ ಎದುರು 2 ಕಾರುಗಳು ಬಂದಿತ್ತು. ಕಾರಿನಲ್ಲಿ ಒಬ್ಬರು ಮಹಿಳೆ ನಾಲ್ವರು ಪುರುಷರು ಇಳಿದು ಅಂಗಡಿ ಬಳಿ ಇದ್ದ 3 ಮಂದಿ ಯುವಕರು ಹಾಗೂ ಓರ್ವ ವೃದ್ಧರಿಗೆ ಗನ್‌ ತೋರಿಸಿ ಕಾರು ಹತ್ತುವಂತೆ ಹೇಳಿದರು. ಆ ಸಂದರ್ಭ ಮಪ್ತಿಯಲ್ಲಿದ್ದ ಅಧಿಕಾರಿಗಳ ಬಳಿ ಐಡಿ ಕಾರ್ಡ್‌ ತೋರಿಸುವಂತೆ ಕೇಳಿದ್ದಾರೆ. ಆದರೆ ಅವರು ತೋರಿಸದೇ ಗನ್‌ ಹಿಡಿದಿದ್ದರಿಂದ ನಾಲ್ವರು ಸ್ಥಳೀಯರು ಕಾರು ಹತ್ತಿದ್ದರು. ಹಂಗಳೂರು ಚರ್ಚ್‌ ಸಮೀಪ ತೆರಳುವಾಗ ವೃದ್ಧ ವ್ಯಕ್ತಿ ಕೆ.ಎಚ್.‌ ಹುಸೈನ್‌ ಎಂಬುವವರು ಎಲ್ಲಿಗೆ ಕರೆದೊಯ್ಯುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳಿಂದ ಉತ್ತರ ಬಾರದ ಹಿನ್ನೆಲೆಯಲ್ಲಿ ಅವರು ಕೂಗಿಕೊಂಡಿದ್ದಾರೆ. ಬೊಬ್ಬೆ ಹೊಡೆದ ಕಾರಣಕ್ಕೆ ಎರಡೂ ಕಾರುಗಳು ಮರಳಿ ಸೌಹಾರ್ದ ಭವನದತ್ತ ಬಂದಿವೆ. ಅಷ್ಟರಲ್ಲಾಗಲೇ ಅಲ್ಲಿ ಜನರ ಗುಂಪು ನೆರೆದಿತ್ತು. ಅಧಿಕಾರಿಗಳನ್ನು ತಾವು ಯಾರು ಎಂದು ಪ್ರಶ್ನಿಸಿದಾಗ ಅವರು ಸಮರ್ಪಕ ಉತ್ತರ ನೀಡಿರಲಿಲ್ಲ. ಹಾಗಾಗಿ ಸ್ಥಳೀಯರು ಮುಗಿಬಿದ್ದುದ್ದು ತಳ್ಳಾಟ ನಡೆದಿದೆ. ಬಳಿಕ ಎಲ್ಲರನ್ನೂ ಕೊಠಡಿಯಲ್ಲಿ ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಕಳ್ಳ ಸಾಗಾಣಿಕೆಯ ವಿರುದ್ಧದ ಕಾರ್ಯಾಚರಣೆ ತಂಡದ ಮಂಗಳೂರು ವಿಭಾಗದ ಪಿಎಸ್‌ಐ ಜಾನಕಿ, ಸಿಬಂದಿ ವರ್ಗದ ಜಗದೀಶ್‌ ಸಾಲ್ಯಾನ್‌, ತಾರಾನಾಥ, ಅಬ್ದುಲ್‌ ರೌಫ್, ಶಿವಾನಂದ, ಬೆಂಗಳೂರು ವೈಲ್ಡ್‌ಲೈಫ್ ಕಂಟ್ರೋಲ್‌ ಬ್ಯೂರೋದ ಪ್ರಸಾದ್‌ ಎಸ್‌., ಮಾಹಿತಿ ದಾರರಾದ ಶಾಬಾಸ್‌, ಶಂಕರ್‌ ಎಂಬುವವರಿದ್ದರು. ಘಟನೆಯಲ್ಲಿ ಗಾಯಗೊಂಡ ಅಧಿಕಾರಿಯನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಬೆಳ್ಳಿಯಪ್ಪ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕುಂದಾಪುರ ಟೌನ್ ಎಸ್ಐ ನಂಜ ನಾಯ್ಕ ಹಾಗೂ ಸಿಬ್ಬಂದಿ ಸಿಐಡಿ ಅಧಿಕಾರಿಗಳನ್ನು ಸ್ಥಳಾಂತರಿಸಿದರು. ಅಧಿಕಾರಿಗಳನ್ನು ಕರೆದೊಯ್ಯುವಲ್ಲಿ ಸ್ಥಳೀಯರೇ ಸಹಕರಿಸಿದರು. ಸ್ಥಳದಲ್ಲಿ ನೂರಾರು ಮಂದಿ ನೆರೆದಿದ್ದರು.

ಕಾರ್ಯಾಚರಣೆಗೆ ಅಡ್ಡಿ – ದೂರು ದಾಖಲು:
ಕಾರ್ಯಾಚರಣೆ ವೇಳೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಪಿಎಸ್‌ಐ ಜಾನಕಿ ದೂರು ದಾಖಲಿಸಿದ್ದಾರೆ. ಅಂಬರ್‌ಗ್ರೀಸ್‌ ಕಳ್ಳಸಾಗಾಣಿಕೆ ಮಾಹಿತಿ ಮೇರೆಗೆ ದಾಳಿ ನಡೆದಿತ್ತು. ಆರೋಪಿತರು ಕುಂದಾಪುರದ ಹೋಟೆಲ್‌ನಲ್ಲಿ ತಂಗಿರುವ ಹಾಗೂ ಅಂಬರ್‌ಗ್ರೀಸ್‌ ಮಧ್ಯಕೋಡಿಯ ಅಂಗಡಿಯೊಂದರಲ್ಲಿ ಇರಿಸಿರುವ ಬಗ್ಗೆ ಮಾಹಿತಿ ಮೇರೆಗೆ ತಂಡವು ಸೌಹಾರ್ದ ಭವನದ ಎದುರಿನ ಅಂಗಡಿಗೆ ದಾಳಿ ನಡೆಸಿದ್ದ ವೇಳೆ ಗುಂಪೊಂದು ಏಕಾಏಕಿ ತನಿಕೆಗೆ ಅಡ್ಡಿಪಡಿಸಿದೆ. ಅಧಿಕಾರಿಗಳ ಮೇಲೆ ಮುಗಿಬಿದ್ದು ಮಾರಣಾಂತಿಕ ಹಲ್ಲೆ ನಡೆಸಿದೆ. ಮೊಬೈಲ್‌ ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.

Exit mobile version