ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಪ್ರಕ್ರಿಯೆಗಳ ಹಿಂದೆ ಮನುಷ್ಯನನ್ನು ಸಹ್ಯವಾಗಿ ಹಾಗೂ ಸಂತೋಷವಾಗಿ ಇಡುವ ಒಳ್ಳೆಯ ಉದ್ದೇಶವಿದೆ. ಸಮುದಾಯವನ್ನು ಹಿಡಿದಿಟ್ಟುಕೊಂಡು, ಸಂಸ್ಕಾರಯುತರನ್ನಾಗಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಅವರು ಗುರುವಾರ ಯುಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ವರ್ಷ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ, ಯಕ್ಷಗಾನದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸತ್ವಯುತವಾಗಿದೆ. ಇಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮನ್ನು ಸಂಸ್ಕಾರಯುತವನ್ನಾಗಿಸಿದೆ ಎಂದರು.
ಯುಸ್ಕೋರ್ಡ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಗಿರೀಶ್ ಶ್ಯಾನುಭಾಗ್, ಲಾವಣ್ಯ ರಿ. ಬೈಂದೂರು ಅಧ್ಯಕ್ಷ ಬಿ. ನರಸಿಂಹ ನಾಯಕ್, ಉಪ್ಪುಂದ ಸಿನಿಯರ್ ಛೇಂಬರ್ ಅಧ್ಯಕ್ಷ ಅಚ್ಚುತ ಬಿಲ್ಲವ, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷೆ ಅನಿತಾ ಆರ್. ಕೆ. ಉಪಸ್ಥಿತರಿದ್ದರು.
ಬಳ್ಳಾರಿಯ ರಂಗಭೂಮಿ ಕಲಾವಿದೆ ಸುಮಂಗಲಾ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಯುಸ್ಕೋರ್ಡ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು.