ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಗೋದಲಿಯಲ್ಲಿ ಬಾಲ ಯೇಸು ಜನನದ ದರ್ಶನ, ಕ್ಯಾರೆಲ್ ಹಾಡಿದ ವಿದ್ಯಾರ್ಥಿಗಳ ಗುಂಪು, ನಡುವೆ ಬಂದ ಸಂತ ಕ್ಲಾಸ್, ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿದ ಕ್ರಿಸ್‌ಮಸ್ ಮರ- ಸಭಾಂಗಣ, ಏಂಜೆಲ್ಸ್, ಜಿಂಗಲ್ ಬೆಲ್ ಸಂಗೀತ, ಪುಟಾಣಿಗಳ ಬಾಯಿ ಸಿಹಿ ಮಾಡಿದ ಕೇಕ್.
ಕರುಣಾಮಯಿ ಬಾಲಯೇಸು ಜನನದ ಕ್ರಿಸ್‌ಮಸ್ ಸಂಭ್ರಮ, ಭಕ್ತಿ -ಭಾವ , ಆರಾಧನೆಯ ಸಂಪ್ರೀತಿಯು ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಗುರುವಾರ ಸಂಜೆ ಮೂಡಿತು. ಅದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ‘ಆಳ್ವಾಸ್ ಕ್ರಿಸ್‌ಮಸ್’ ಸಂಭ್ರಮಾಚರಣೆ.
ಸಂದೇಶ ನೀಡಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯಾಧ್ಯಕ್ಷ (ಬಿಷಪ್) ಡಾ. ಪೀಟರ್ ಪಾವ್ಲ್ ಸಲ್ಡಾನಾ, ‘ಭರವಸೆ ನಿರಾಶೆ ಮೂಡಿಸುವುದಿಲ್ಲ. ಬದುಕು ಪ್ರೀತಿಯ ಪಥ. ಜೀವನದಲ್ಲಿ ಉನ್ನತ ಭರವಸೆಯೇ ಕ್ರಿಸ್ ಮಸ್ ಸಂದೇಶ’ ಎಂದರು.
‘ಹ್ಯಾಪಿ ಕ್ರಿಸ್ ಮಸ್’ ಎಂದು ಶುಭಕೋರಿ ಮಾತು ಆರಂಭಿಸಿದ ಅವರು, ‘ಇಲ್ಲಿಗೆ ಕ್ರಿಸ್ ಮಸ್ ಬಂದಿದೆ. ಸತ್ಯ ಮತ್ತು ಬದುಕು ನಮ್ಮದಾಗಲಿ. ನಮ್ಮೆಲ್ಲ ಒಳಿತಿಗಾಗಿ ದೈವಿಕ ಮನುಷ್ಯನಾದರು. ಅವರ ಅನುಸರಣೆಯಿಂದ ಮನುಷ್ಯ ದೈವಿಕ ಆಗಬಹುದು’ ಎಂದರು.
‘ತಪ್ಪುನ್ನು ಅಂತ್ಯಗೊಳಿಸಲು ಯೇಸು ಶಿಲುಬೆ ಏರಿದರು. ಮತ್ತೆ ಪುನರುತ್ಥಾನಗೊಂಡರು. ಆದರೆ, ಅವರು ಅಮರ. ಕ್ಷಮೆ, ಪ್ರೀತಿ, ಕರುಣೆಯು ಯೇಸು ಸಂದೇಶ’ ಎಂದು ಉಲ್ಲೇಖಿಸಿದರು.
ಒಬ್ಬರಲ್ಲಿ ಬದುಕಿನ ಭರವಸೆ ಮೂಡಿಸಿದರೂ ನಿಮ್ಮ ಬದುಕು ಸಾರ್ಥಕ. ಯೇಸು ಅವರ ಸಂದೇಶದಂತೆ ಸರ್ವರ ಜೊತೆಗಿರು, ಜೀವಿಸು, ಸಾವಿನಲ್ಲೂ ಜೊತೆಯಾಗಿರು. ಬಡವರು, ಶೋಷಿತರು, ಸಮಸ್ಯೆಗೆ ಈಡಾದವರ ಜೊತೆ ಯೇಸು ಇದ್ದಾರೆ. ಅದೇ ಭರವಸೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಮಾತನಾಡಿ, ‘ಭಾರತವು ಒಂದು ಜಾತಿ ಅಥವಾ ಧರ್ಮದ ದೇಶ ಆಗಲು ಸಾಧ್ಯ ಇಲ್ಲ. ಸಾಮರಸ್ಯ, ಸೌಹಾರ್ದತೆಯೇ ದೇಶದ ಭವಿಷ್ಯ’. ಭಾರತೀಯರು ಭಾಗ್ಯವಂತರು. 144 ಕೋಟಿ ಜನಸಂಖ್ಯೆಯ ದೇಶ. ಹಲವು ಭಾಷೆ, ಜಾತಿ, ಧರ್ಮ ಇದ್ದರೂ ಎಲ್ಲರೂ ಒಂದಾಗಿ ಬಾಳುವ ದೇಶ. ದೇಶದ ಸಹಿಷ್ಣುತೆಗೆ ಕ್ರೈಸ್ತರು ನೀಡಿದ ಕೊಡುಗೆ ಅಪಾರ ಎಂದರು.
ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆಗೆ ಮೇಲ್ಪಂಕ್ತಿಯ ಕೊಡುಗೆ ನೀಡಿದ ಕ್ರೈಸ್ತರು, ಅಂತರಗಳನ್ನು ದೂರ ಮಾಡಿದರು ಎಂದು ಅವರು ವಿವರಿಸಿದರು.
ದಯೆ, ಕರುಣೆ, ತ್ಯಾಗ, ದ್ವೇಷಿಸುವವನ್ನೂ ಪ್ರೀತಿಸು, ಯಾರಿಗೂ ನೋವು ಮಾಡಬೇಡ ಎಂಬಿತ್ಯಾದಿ ಮೌಲ್ಯಗಳನ್ನು ನೀಡಿದ ಕ್ರೈಸ್ತ ಧರ್ಮವು ಸುಧಾರಣೆಗೆ ಕೊಡುಗೆ ನೀಡಿತು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
‘ಎಲ್ಲರ ಒಳಿತು, ಶಾಂತಿ, ಪ್ರೀತಿ, ಅಹಿಂಸಾ ಬದುಕಿನ ಪ್ರೇರಣೆಯೇ ಕ್ರಿಸ್ ಮಸ್’ ಎಂದ ಅವರು, ‘ಸರ್ವ ಧರ್ಮ ಗೌರವಿಸುವ ಮನೋಭಾವವನ್ನು ಆಳ್ವಾಸ್ ಕುಟುಂಬ ಹೊಂದಿದೆ. ನಮ್ಮದು ಮಾನವ ಧರ್ಮ. ಇಲ್ಲಿ ಜ್ಞಾನದ ಬೆಳಕು ಇದೆ. ಎಲ್ಲ ಮೌಲ್ಯಗಳ ಜೊತೆ ಜೀವದಯೆ, ಕಾರುಣ್ಯವೂ ನಮ್ಮ ಜೀವ ದ್ರವ್ಯವಾಗಿದೆ ಎಂದರು.
ಸದ್ಭಾವನೆ ನಮ್ಮ ಸಂದೇಶ. ನಾವು ಮಹಾವೀರ ಜಯಂತಿ, ಕ್ರಿಸ್ ಮಸ್, ರಮ್ಜಾನ್, ದೀಪಾವಳಿ ಸೇರಿದಂತೆ ಹಬ್ಬಗಳನ್ನು ಆಚರಿಸುತ್ತೇವೆ. ನಿಮ್ಮ ಪ್ರೀತಿಗೆ ನಾವು ಚಿರ ಋಣಿ, ಕೂಡಿ ಬದುಕುವ ಎಂದರು.
ಇದಕ್ಕೂ ಮೊದಲು ಪ್ರಾರ್ಥನೆ ನೆರವೇರಿಸಿದ ಮೂಡುಬಿದಿರೆ ಕೊರ್ಪುಸ್ ಕ್ರೈಸ್ತ ಚರ್ಚ್ ಧರ್ಮಗುರು ಒನಿಲ್ ಡಿಸೋಜ, ‘ವಿನಿಮಯದ ಉತ್ಸವವೇ ಕ್ರಿಸ್ ಮಸ್. ಯೇಸುಸ್ವಾಮಿ ಜಗತ್ತಿಗೆ ನೀಡಿದ ಮಾನವೀಯತೆಯೇ ಅವರ ಸಂದೇಶ. ಹಾಗಾಗಿ ಅವರ ಕೊಡುಗೆಯನ್ನು ಶಿಕ್ಷಣ, ಸಶಕ್ತೀಕರಣ, ಚಿಕಿತ್ಸೆ ಇತ್ಯಾದಿ ಸೇವೆಯಲ್ಲಿ ಕಾಣುತ್ತೇವೆ’ ಎಂದು ಹೇಳಿದರು.
ಚೀನಾದ ಜೀ ಜಿಯಾಂಗ್ ಪ್ರಾಂತ್ಯದ ಟಿಯು ಕ್ರಿಸ್‌ಮಸ್ ಆಚರಣೆಯ ರಾಜಧಾನಿ ಎಂದು ಕರೆಸಿಕೊಂಡಿದೆ ಎಂದರು.
ಬೆಳ್ತಂಗಡಿ ಸಿಯೋನ್ ಆಶ್ರಮ ಟ್ರಸ್ಟ್ ನ ಡಾ. ಯು.ಸಿ.ಪೌಲೋಸ್ ಹಾಗೂ ಅವರ ಧರ್ಮ ಪತ್ನಿ ಮೇರಿ ಪೌಲೋಸ್ ಅವರನ್ನು 25 ಸಾವಿರ ರೂಪಾಯಿ, ಹಾರ, ಶಾಲು, ಫಲಕ, ಪ್ರಮಾಣ ಪತ್ರ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಡಾ. ಯು.ಸಿ.ಪೌಲೋಸ್, ಸಮಾಜದ ಅತಿ ಸಣ್ಣವರಿಗೆ ನೀಡುವ ಸ್ಪಂದನವೇ ದೇವರ ಕಾರ್ಯ. ಮೋಹನ ಆಳ್ವ ಅವರು ಅಂತಹ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಆಳ್ವರ ಸಾಮಾಜಿಕ ಕಾರ್ಯಗಳು ಕ್ರಿಸ್ ಮಸ್ ಸಂಭ್ರಮದಷ್ಟೇ ಪವಿತ್ರ. ನಾವೆಲ್ಲ ನಿಮ್ಮಿಂದ ಕಲಿಯಲು ಸಾಕಷ್ಟಿದೆ ಎಂದರು.
ವಿದ್ಯಾಗಿರಿಯು ಸಾಧನೆಯಲ್ಲಿ ‘ವಿದ್ಯಾ ಹಿಮಾಲಯ’ ಆಗಲಿ ಎಂದು ಆಶಿಸಿದರು.
500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಮೂಹ ತುಳು, ಕನ್ನಡ, ಕೊಂಕಣಿ, ಮಲೆಯಾಳ, ಹಿಂದೆ ಸೇರಿದಂತೆ ಹಲವು ಭಾಷೆಗಳಲ್ಲಿ ಕ್ಯಾರೆಲ್ ಹಾಡಿದರೆ, ಏಂಜೆಲ್ಸ್, ಸಂತ ಕ್ಲಾಸ್, ಬಿಳಿ- ಕೆಂಪು ಧಿರಿಸು ತೊಟ್ಟ ನೂರಾರು ವಿದ್ಯಾರ್ಥಿಗಳು ಸಂಭ್ರಮ ಹೆಚ್ಚಿಸಿದರು. ಕಲಾಂಗಣ್ ಮಾಂಡ್ ಸೋಭಾಣೆ ತಂಡದ ಸದಸ್ಯರು ಗಾಯನ ನಡೆಸಿಕೊಟ್ಟರು.
ಮಾಜಿ ಸಚಿವ ಅಭಯ ಚಂದ್ರ ಜೈನ್ ಇದ್ದರು. ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ರೋಶನ್ ಪಿಂಟೊ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.