Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿಯ ಪ್ರಸಿದ್ದ ಜಾತ್ರಾ ಮಹೋತ್ಸವ ಕೋಟೇಶ್ವರದ ಕೊಡಿಹಬ್ಬ

ನಾಡಿನ ಪ್ರಸಿದ್ದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ, ಕರಾವಳಿಯ ಅತ್ಯಂತ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ‘ಕೊಡಿ ಹಬ್ಬ’ದ ಮನ್ಮಹಾರಥೋತ್ಸವ ಈ ಬಾರಿ ಕಾರ್ತಿಕ ಮಾಸದ ಹುಣ್ಣಿಮೆಯಂದು (ನ.30 ಸೋಮವಾರ) ಜರುಗಲಿದೆ. ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ರಥೋತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿದೆ. ಏಳು ದಿವಸಗಳ ಕಾಲ ನಡೆಯುವ ಉತ್ಸಕ್ಕೆ 60 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಗರ್ನಪಠಾರೋಹಣ ಮಾಡುವುದರ ಮೂಲಕkundapra.com_kototirta ಚಾಲನೆ ನೀಡಲಾಗಿದೆ. ಈ ಸಂದಂರ್ಭದಲ್ಲಿ ಜರುಗುವ ಧಾರ್ಮಿಕ ಆಚರಣೆಗಳು, ಕಟ್ಟೆಪೂಜೆ, ರಥೋತ್ಸವ ಮರುದಿನ ನಡೆಯುವ ಓಕುಳಿ ಆಟ ಹಬ್ಬಕ್ಕೆ ಮತ್ತಷ್ಟು ಕಳೆಗಟ್ಟಲಿದೆ. ಜಾತ್ರಾ ಪ್ರಯುಕ್ತ ಇಡೀ ಕೋಟೇಶ್ವರ ಪಟ್ಟಣ ಸಿಂಗರಿಸಿಕೊಂಡಿದೆ.

ಭಾವೈಕ್ಯತೆಯ ಸಂಗಮ:
ಇಲ್ಲಿನ ಬ್ರಹ್ಮರಥವನ್ನು ನಿರ್ಮಿಸುವಲ್ಲಿ ಮುಸ್ಲಿಂ ಬಾಂಧವರ ಕೊಡುಗೆಯೂ ಇದೆ. ಪಾರಂಪರಿಕವಾದ ಧಾರ್ಮಿಕ ಕಾರ್ಯವನ್ನು ಸ್ಥಳೀಯ ಮುಸ್ಲಿಂ ಬಂಧುಗಳು ಅತ್ಯಂತ ಭಯ ಭಕ್ತಿಯಿಂದ ನೆರವೇರಿಸುತ್ತಾರೆ. ಮೈಸೂರು ರಾಜ್ಯದ ದೊರೆ ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದಿರುವ `ದೀವಿಟಿಗೆ ಸಲಾಮ್` ಎನ್ನುವ ವಿಶಿಷ್ಠ ಧಾರ್ಮಿಕ ಸೇವೆ ಇಂದಿಗೂ ಮುಂದುವರೆಯುತ್ತಿದೆ.

ಕೊಡಿ ಕೊಂಡೊಯ್ಯುವ ಮತ್ತು ಸುತ್ತಕ್ಕಿ ಸೇವೆ
ಜಾತ್ರೆಯ ಆಚರಣೆಯಲ್ಲಿ ಅತ್ಯಂತ ಪ್ರಮುಖವಾದದು ‘ಕೊಡಿ’ ಕೊಂಡೊಯ್ಯುವ ಹಾಗೂ ‘ಸುತ್ತಕ್ಕಿ ಸೇವೆ’ ಆಚರಣೆಗಳು. ಇದು ಜಿಲ್ಲೆಯಲ್ಲಿಯೇ ಅಪರೂಪವಾದುದು. ನವದಂಪತಿ ಕೊಡಿ ಹಬ್ಬದ ದಿನದಂದು ದೇವರ ದರ್ಶನ ಮಾಡಿ ಕಬ್ಬಿನ ಕೊಡಿ (ಜಲ್ಲೆ) ಕೊಂಡೊಯ್ದರೆ ಅವರ ಬಾಳಿನಲ್ಲಿ ಕೊಡಿ ಅರಳುತ್ತದೆ ಎನ್ನುವ ನಂಬಿಕೆ ಇದೆ.

ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ ‘ಕೋಟಿ ತೀರ್ಥ’ ಪುಷ್ಕರಣಿಯ ಸುತ್ತ ಅಪೇಕ್ಷಿತರು ಬಿಳಿಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳುತ್ತಾರೆ. ಭಕ್ತಾಧಿಗಳು ಪುಷ್ಕರಣಿಯಲ್ಲಿ ಮುಳುಗೆದ್ದು ಬಿಳಿ ಬಟ್ಟೆಹಾಸಿನ ಮೇಲೆ ಅಕ್ಕಿಯನ್ನು ಚೆಲ್ಲುತ್ತಾರೆ. ಇದನ್ನೇ `ಸುತ್ತಕ್ಕಿ ಸೇವೆ` ಎನ್ನಲಾಗುತ್ತದೆ. ರಥೋತ್ಸವ ಮರುದಿನ ರಾತ್ರಿ ಚೂರ್ಣೋತ್ಸವ, ಮಧ್ಯರಾತ್ರಿ ಓಕುಳಿಯಾಟ ಹಾಗೂ ಅವಭೃತ ಸ್ನಾನ ನಡೆಯುತ್ತದೆ. ಇದನ್ನು ವೀಕ್ಷಿಸಲು ಸಾವಿರಾರು ಜನ ಸೇರುತ್ತಾರೆ. `ಕೋಡಿ ಹಬ್ಬ`ಕ್ಕಾಗಿ ಪರಿಸರದ ಸಂಘ ಸಂಸ್ಥೆಗಳು, ಸ್ಥಳೀಯರು ಜಾತಿ- ಭೇದ ಮರೆತು ಸಿದ್ಧತೆ ನಡೆಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗತ್ತವೆ.

ಈ ಭಾರಿ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ವಿಧಿವಿಧಾನಗಳಷ್ಟೇ ಜರುಗಲಿದ್ದು ಹೆಚ್ಚಿನ ಜನಸಂದಣಿಗೆ ಅವಕಾಶವಿಲ್ಲ. ಜಾತ್ರೆಯ ಅಂಗಡಿ ಮಂಗಟ್ಟನ್ನು ತೆರೆಯಲು ಕೂಡ ಅವಕಾಶವಿಲ್ಲ.

 

Exit mobile version