ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ಹಿರಿದು. ಉತ್ತಮ ಶಿಕ್ಷಕರಿದ್ದಲ್ಲಿ ವಿದ್ಯಾರ್ಥಿ ಹಾಗೂ ಶಾಲೆಗೆ ಎಂದಿಗೂ ಹಿನ್ನಡೆ ಎಂಬುದಿಲ್ಲ. ಸಮಾಜದಲ್ಲಿಯೂ ಶಿಕ್ಷಕ ವೃತ್ತಿಗೆ ವಿಶೇಷ ಸ್ಥಾನಮಾನವಿದೆ ಎಂದು ಮಾಜಿ ಶಾಸಕ, ಹೆಮ್ಮಾಡಿ ಶ್ರೀ ವಿ.ವಿ.ವಿ ಮಂಡಳಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಶನಿವಾರ ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯ ರತ್ತೂಬಾಯಿ ವಾರ್ಷಿಕ ಸಂಭ್ರಮ – 2024 ಉದ್ಘಾಟಿಸಿ ಮಾತನಾಡಿ ಶ್ರೀ ವಿ.ವಿ.ವಿ ಮಂಡಳಿ ಸಂಸ್ಥಾಪಕರ ಆಶಯದಂತೆ ನಡೆದುಕೊಂಡು ಬಂದಿದ್ದು, ಕಠಿಣ ಸಂದರ್ಭದಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಯಾವುದೇ ತೊಂದರೆಯಿಲ್ಲದೇ ಮುನ್ನಡೆಸಲಾಗಿದೆ. ಯಾವುದೇ ಅಡ್ಡಿ ಇಲ್ಲದಂತೆ ಇದು ಮುಂದುವರಿಯಲಿದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಬಾಬು ಶೆಟ್ಟಿ ಹಾಗೂ ಇತ್ತೀಚಿಗೆ ಸೇವೆಯಿಂದ ನಿವೃತ್ತರಾದ ಶಿಕ್ಷಕ ಚಂದ್ರ ಕೆ. ದೇವಾಡಿಗ, ಆದರ್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ನಿರ್ಮಲಾ ಪಿ.ಕೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವಿ.ವಿ.ವಿ ಮಂಡಳಿ ನಿರ್ದೇಶಕ ಸಂದೀಪ್ ಪೂಜಾರಿ, ಬೈಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ, ಉದ್ಯಮಿ ಸೂರಜ್ ಜಿ. ಪೂಜಾರಿ, ಹೆಮ್ಮಾಡಿ ಜನತಾ ಸ್ವತಂತ್ರ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ, ಉದ್ಯಮಿ ವೆಂಕಟ್ರಮಣ ಬಿಜೂರು, ರಾಜ್ಯ ಸರ್ಕಾರಿ ನೌಕರರ ಸಂಘದ ಬೈಂದೂರು ವಲಯಾಧ್ಯಕ್ಷ ಶೇಖರ ಪೂಜಾರಿ, ಶಿಕ್ಷಣ ಇಲಾಖೆಯ ಮಂಜುನಾಥ ಶಿರೂರು, ರತ್ತೂಬಾಯಿ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ, ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳವಾರ, ಶಾಲಾ ಪೋಷಕ ಪ್ರತಿನಿಧಿಗಳ ಸಂಘದ ಅಧ್ಯಕ್ಷೆ ವಿನಯಾ, ಶಾಲಾ ವಿದ್ಯಾರ್ಥಿ ನಾಯಕ ಮನಿಷ್ ಉಪಸ್ಥಿತರಿದ್ದರು.
ಶಾಲೆಯ ಹಳೆ ವಿದ್ಯಾರ್ಥಿನಿ ಡಾ. ಭವ್ಯಶ್ರೀ ಸ್ವಸ್ತಿವಾಚನ ಮಾಡಿದರು. ಪ್ರಶಸ್ತಿ ಪುರಸ್ಕೃತ ಜನತಾ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ, ಮಂಗಳೂರು ವಿವಿ ಚೆಸ್ ಚಾಂಪಿಯನ್ ಮನಿಷ್ ಮದ್ದೋಡಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ವಿ.ವಿ.ವಿ ಮಂಡಳಿ ಸದಸ್ಯರಾದ ಸಂದೀಪ್ ಪೂಜಾರಿ, ರಘುರಾಮ ಪೂಜಾರಿ, ಎಸ್.ಎಸ್.ಎಲ್.ಸಿ ಶೇ.100 ಫಲಿತಾಂಶ ನೀಡಲು ಶ್ರಮಿಸಿದ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ತೇರ್ಗಡೆಯಾದ ಬ್ಯಾಚ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಳಿಕ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯ ಆನಂದ ಮದ್ದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ವಿ.ವಿ.ವಿ ಮಂಡಳಿ ಸದಸ್ಯ ರಘುರಾಮ ಪೂಜಾರಿ ಶಿರೂರು ಸ್ವಾಗತಿಸಿ, ಶಿಕ್ಷಕ ಗುರುರಾಜ ಪೂಜಾರಿ ವಂದಿಸಿದರು. ಶಿಕ್ಷಕ ಪ್ರಕಾಶ್ ಮಾಕೋಡಿ ಕಾರ್ಯಕ್ರಮ ನಿರೂಪಿಸಿದರು.