Site icon Kundapra.com ಕುಂದಾಪ್ರ ಡಾಟ್ ಕಾಂ

ಸೈಕಲ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ

ಬೈಂದೂರು: ಇಲ್ಲಿಗೆ ಸಮೀಪದ ನಾಗೂರು ಆಂಜನೇಯ ದೇವಸ್ಥಾನದ ಬಳಿ ಬೈಂದೂರು ಕಡೆಗೆ ಸಾಗುತ್ತಿದ್ದ ಸ್ವಿಫ್ಟ್ ಕಾರು ಎದುರಿನಿಂದ ಬರುತ್ತಿದ್ದ ಸೈಕಲ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ, ಸೈಕಲ್ ಸವಾರ ನಾಗೂರು ನಿವಾಸಿ ಸುರೇಶ್ ಎಂಬುವವರ ಮಗ ನಾಗೇಶ್(16) ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಸಹಸವಾರ ಅಕ್ಷಯ(16) ಗಾಯಗೊಂಡ ಘಟನೆ ಸಂಜೆ ವರದಿಯಾಗಿದೆ.

ಘಟನೆಯ ವಿವರ:
ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾಗಿರುವ ನಾಗೇಶ್ ಹಾಗೂ ಅಕ್ಷಯ್ ತರಗತಿ ಅವಧಿಯ ಬಳಿಕ ಗ್ರೂಫ್ ಸ್ಟಡಿ ಮುಗಿಸಿಕೊಂಡು ರಾ.ಹೆ.66ರಲ್ಲಿ ನಾಗೂರು ಆಂಜನೇಯ ದೇವಸ್ಥಾನದ ಸಮೀಪದ ತಮ್ಮ ಮನೆಗೆ ತೆರಳುತ್ತಿದ್ದರು. ಇದೇ ವೇಳೆ ಮಂಗಳೂರಿನಿಂದ ಶಿವಮೊಗ್ಗ ಹೊರಟ್ಟಿದ್ದ ಸ್ವಿಫ್ಟ್ ಕಾರು ಒಂದೇ ಸಾರಿ ಬಲಕ್ಕೆ ಚಲಾಯಿಸಿದ್ದರಿಂದ ಎದುರಿಗಿದ್ದ ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ನಾಗೇಶ್ ಸ್ಥಳದಲ್ಲಿಯೇ ಮೃತಪಟ್ಟರೇ, ಹಿಂದೆ ಕುಳಿತಿದ್ದ ಅಕ್ಷಯ್‌ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.(ಕುಂದಾಪ್ರ ಡಾಟ್ ಕಾಂ ಸುದ್ದಿ) ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಬಳಿಕ ನಿಲ್ಲಿಸದೇ ಮುಂದೆ ಸಾಗಿದ್ದ ಕಾರು ಚಾಲಕ ಎದುರಿಗಿದ್ದ ಇನ್ನೊಂದು ಕಾರಿಗೂ ಢಿಕ್ಕಿ ಹೊಡೆದು ಅಲ್ಲಿಯೂ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಕಾರು ಕಂಚಿಕಾನ್ ಸಮೀಪಿಸುತ್ತಿದ್ದಂತೆ ಸ್ಥಳಿಯರು ಕಾರನ್ನು ಅಡ್ಡಗಟ್ಟಿ ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version