ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಮನ್ವಿತಾ ಎಸ್. ಈ ಬಾರಿಯ ಉಡುಪಿ ಜಿಲ್ಲಾ 10ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುತ್ತಾಳೆ.
ಈಕೆ ಚಿಕ್ಕ ವಯಸ್ಸಿನಲ್ಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದು ತನ್ನ 4ನೇ ವಯಸ್ಸಿಗೆ ಯಕ್ಷಗಾನ ಗೆಜ್ಜೆ ಕಟ್ಟಿ ವೇದಿಕೆ ಏರಿ ನೃತ್ಯ ಪ್ರದರ್ಶನ ನೀಡಿರುತ್ತಾಳೆ. ಭರತನಾಟ್ಯದಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಿನಿಯರ್ ವಿಭಾಗದಲ್ಲಿ ತರಭೇತಿ ಮುಂದುವರಿಸಿದ್ದಾಳೆ. ಭಾಷಣ ಮತ್ತು ಕಾರ್ಯಕ್ರಮ ನಿರೂಪಣೆ ಈಕೆಯ ಪ್ರೀತಿಯ ಕ್ಷೇತ್ರವಾಗಿದ್ದು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡು ಜಿಲ್ಲಾ ಮಟ್ಟಕ್ಕೂ ಆಯ್ಕೆಯಾಗಿತ್ತಾಳೆ. ಅಲ್ಲದೇ 2023-24 ನೇ ಸಾಲಿನ ಮಕ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ನಿರೂಪಣೆಗೆ ಆಯ್ಕೆಯಾಗಿ ಉತ್ತಮ ನಿರೂಪಣೆಯಿಂದ ಜನಮನ ಗೆದ್ದಿದ್ದಾಳೆ.
ಕುಂದಾಪುರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ “ತಾರ್ಕಣಿ-2024” ಪ್ರಯುಕ್ತ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾಳೆ. ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಸುವಿಕೆ, ಹೊಂಬೆಳಕು ಪುಸ್ತಕ ಬಿಡುಗಡೆಯಂತಹ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಷಣಕಾರ್ತಿಯಾಗಿ ಜನ ಮೆಚ್ಚುಗೆ ಪಡಿದಿದ್ದಾಳೆ. ಈ ಸಾಲಿನ ಕಾರಂತ ಪ್ರತಿಷ್ಠಾನ ನೀಡಲ್ಪಡುವ ಬಾಲಪುರಸ್ಕಾರಕ್ಕೂ ಆಯ್ಕೆಯಾಗಿದ್ದಾಳೆ.
ಈಕೆ ಸೂರ್ಯಕಾಂತ ಬಿ. ಬಸ್ರೂರು ಹಾಗೂ ಲತಾ ದಂಪತಿಗಳ ಪುತ್ರಿ.
ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.