Kundapra.com ಕುಂದಾಪ್ರ ಡಾಟ್ ಕಾಂ

ಸಮಾಜ ಸಸೂತ್ರವಾಗಿ ನಡೆಯಲು ಸಾಂಸ್ಕೃತಿಕ ವಾತಾವರಣ ಮುಖ್ಯ: ಉಪನ್ಯಾಸಕ ನವೀನ್ ಹೆಚ್. ಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಮಾಜ ಸಸೂತ್ರವಾಗಿ ನಡೆಯಲು ಸಾಂಸ್ಕೃತಿಕ ವಾತಾವರಣ ಅತ್ಯಗತ್ಯ. ಅದು ಎಷ್ಟು ಮುಖ್ಯ ಎಂಬುದನ್ನು ಹಿರಿಯರು ಕಂಡುಕೊಂಡು ಪೋಷಿಸುತ್ತಾ ಬಂದಿದ್ದರು. ಮುಂದೆಯೂ ಕಥೆ, ಸಂಗೀತ, ನಾಟಕ ಮೊದಲಾದ ಪ್ರಕಾರಗಳನ್ನು ಪೋಷಿಸುವ ಕಾರ್ಯವಾಗಬೇಕಿದೆ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನವೀನ್ ಹೆಚ್. ಜೆ ಹೇಳಿದರು.

ಅವರು ಶನಿವಾರ ಯುಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ವರ್ಷ ವೈಭವ – 3 ದಿನಗಳ ಯಕ್ಷ – ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಕಲಾಸಕ್ತರೂ ಸಮಾಜವನ್ನು ನೋಡುವ ದೃಷ್ಟಿಕೋನವೂ ಬೆರೆಯಾದದ್ದು. ಅದನ್ನು ಪೋಷಿಸುವುದು ಮುಖ್ಯ. ಬುದ್ದಿ ಮತ್ತು ಮನಸ್ಸು ಒಟ್ಟಾಗಿ ಆಸ್ವಾದಿಸಿದರೆ ಅದೇ ಸುಂದರ ವಾತಾವರಣ ಎಂದರು.

ಯಕ್ಷಗಾನ ಭಾಗವತ ಮಂಜುನಾಥ ದಾಸ್ ಅವರನ್ನು ಸನ್ಮಾನಿಸಲಾಯಿತು. ಯುಸ್ಕೋರ್ಡ್ ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಉಪ್ಪುಂದ ಅಧ್ಯಕ್ಷ ಮಂಜುನಾಥ ದೇವಾಡಿಗ, ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಭಾಸ್ಕರ್ ಉಪಸ್ಥಿತರಿದ್ದರು.

ಯುಸ್ಕೋರ್ಡ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಪಿ. ಬೈಂದೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುರಭಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Exit mobile version