Kundapra.com ಕುಂದಾಪ್ರ ಡಾಟ್ ಕಾಂ

ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ: ಪುತ್ರನಿಂದ ಹೇಬಿಯಸ್ ಕಾರ್ಪಸ್?

ಕುಂದಾಪುರ: ಕಳೆದ ಸರಿ ಸುಮಾರು ಐದು ತಿಂಗಳ ಹಿಂದೆ ಮನೆಯಿಂದ ನಿಗೂಢವಾಗಿ ನಾಪತ್ತೆಯಾದ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಮಾಲತಿ ಬಿ. ಶೆಟ್ಟಿ (65) ಅವರ ಪತ್ತೆಗೆ ಸಂಬಂಧಿಸಿದಂತೆ ಸಾಕಷ್ಟು ಹುಡುಕಾಟದ ನಂತರವೂ ಯಾವುದೇ ಪ್ರಯೋಜನ ಇಲ್ಲದಿರುವುದರಿಂದ ಅವರ ಪುತ್ರ ಅಮೇರಿಕಾದ ಕಂಪೆನಿಯೊಂದರಲ್ಲಿ ಸಿ.ಇ.ಓ. ಆಗಿರುವ ಸತೀಶ್ ಶೆಟ್ಟಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಮೂಲಕ ತಾಯಿಯನ್ನು ಹುಡುಕಿಕೊಡುವಂತೆ ತಮ್ಮ ಬಾವ ರಾಮಮನೋಹರ ಶೆಟ್ಟಿ ಮೂಲಕವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆನ್ನಲಾಗಿದೆ.

ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ತನ್ನ ಮನೆಯಲ್ಲಿ ನೆಲೆಸಿದ್ದ ಮಾಲತಿ ಬಿ.ಶೆಟ್ಟಿ ಅವರು 2015ರ ಜೂನ್ 24 ರಂದು ಮಧ್ಯಾಹ್ನ ಊಟದ ಬಳಿಕ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಒಂದೆರಡು ದಿನ ಸುತ್ತಮುತ್ತಲು ಹುಡುಕಾಟ ನಡೆಸಿದ ಕುಟುಂಬಿಕರು ಕೊನೆಗೆ ಜೂನ್ 26ರಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಾಯಿ ನಾಪತ್ತೆಯಾಗುವ ಒಂದೆರಡು ದಿನಗಳ ಹಿಂದಷ್ಟೇ ಅಮೇರಿಕಾಗೆ ತೆರಳಿದ್ದ ಸತೀಶ್ ಶೆಟ್ಟಿ ತಾಯಿ ನಾಪತ್ತೆಯಾದ ಸುದ್ದಿ ಕೇಳಿ ಊರಿಗೆ ಬಂದವರು ಆಕಾಶ ಭೂಮಿ ಒಂದಾಗುವಂತೆ ಹುಡುಕಾಟ ನಡೆಸಿದ್ದರು. ಪೊಲೀಸ್ ಮೇಲಧಿಕಾರಿಗಳಿಗೂ ಮನವಿ ಸಲ್ಲಿಸಿದ ಅವರು ಬ್ಲಾಗ್ ಆರಂಭಿಸಿ ಅದರಲ್ಲಿ ತಾಯಿ ಮಾಲತಿ ಶೆಟ್ಟಿ ಪೋಟೋ ಸಹಿತ ಎಲ್ಲಾ ವಿವರಗಳು, ಪೊಲೀಸರ ತನಿಖೆ, ಮಾಧ್ಯಮಗಳ ವರದಿಯನ್ನು ಅಪ್-ಲೋಡ್ ಮಾಡಿದ್ದರು. ಅಲ್ಲದೇ ಭಿತ್ತಿಪತ್ರಗಳ ಮೂಲಕ ತಾಯಿ ಮಾಲತಿ ಶೆಟ್ಟಿ ಅವರನ್ನು ಹುಡುಕಿಕೊಟ್ಟಲ್ಲಿ 1 ಲಕ್ಷ ಬಹುಮಾನವನ್ನು ನೀಡುವುದಾಗಿ ಪ್ರಕಟಿಸಿದ್ದರು

ಇತ್ತ ಪೊಲೀಸರು ಸಹಾ ವಿವಿಧ ಗುಮಾನಿಗಳನ್ನು ಗುಡ್ಡೆ ಹಾಕಿ ಮಾಲತಿ ಶೆಟ್ಟಿ ಅವರ ಪತ್ತೆಗೆ ಇಳಿದರೂ ಪ್ರಕರಣ ಭೇದಿಸಲಾಗಿರಲಿಲ್ಲ. ಉಡುಪಿ ಎಸ್ಪಿ ಅಣ್ಣಾಮಲೈ ಅವರು ಸ್ವಯಂ ಮಾಲತಿ ಶೆಟ್ಟಿ ನಿವಾಸಕ್ಕೆ ತೆರಳಿ ತನಿಖೆಯನ್ನು ಚುರುಕುಗೊಳಿಸಲು ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಪಿ.ಎಂ. ಅವರಿಗೆ ಸೂಚಿಸಿದ್ದರು. ಕುಂದಾಪುರ ಎಸ್ಸೈ ನಾಸೀರ್ ಸಹಿತ ಇಡೀ ಪೊಲೀಸ್ ಗಢಣವೇ ಮಾಲತಿ ಶೆಟ್ಟಿಯವರ ಪತ್ತೆಗಿಳಿದು, ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ಸಹಿತ. ಮಾಲತಿ ಶೆಟ್ಟಿ ಜೊತೆಗೆ ಆತ್ಮೀಯತೆ ಹೊಂದಿದ್ದ ನೆರೆಹೊರೆಯವರು, ಮನೆ ಕೆಲಸದವರು, ಊರಿನವರ ವಿಚಾರಣೆಯನ್ನು ನಡೆಸಿದಾಗಲೂ ಪರಿಣಾಮ ಮಾತ್ರ ಶೂನ್ಯವಾಗಿತ್ತು. ಇನ್ನು ಮಾಲತಿ ಶೆಟ್ಟಿಯವರು ಕೆಲವೊಮ್ಮೆ ಹೇಳದೇ ಕೇಳದೇ ಮನೆಯಿಂದ ಹೊರಹೋಗುವ ಅಭ್ಯಾಸ ಹೊಂದಿದ್ದು, ಅವರು ಹೆಚ್ಚಾಗಿ ತೆರಳುತ್ತಿದ್ದ ದೇವಸ್ಥಾನಗಳು, ಇತರ ಸ್ಥಳಗಳಿಗೆ ಹಾಗೂ ಕಟ್ಟ ಕಡೆಗೆ ಅನುಮಾನದ ನೆಲೆಯಲ್ಲಿ ಸುತ್ತಮುತ್ತಲಿನ ಕೆರೆ ಹಾಗೂ ಬಾವಿಗಳನ್ನು ಹುಡುಕಾಟ ನಡೆಸಿದರೂ ಮಾಲತಿ ಶೆಟ್ಟಿಯವರು ನಿಗೂಢವಾಗಿಯೇ ಉಳಿದಿದ್ದರು. ಇಷ್ಟು ದಿನಗಳುರುಳಿ ಹೋದರೂ ತಾಯಿಯ ಕಿಂಚಿತ್ ಸುಳಿವನ್ನು ಪಡೆಯುವಲ್ಲಿಯೂ ಸಹ ವಿಫಲರಾದ ಸತೀಶ್ ಶೆಟ್ಟಿ ಅಂತಿಮವಾಗಿ ಹೇಬಿಯಸ್ ಅರ್ಜಿಯ ಮೊರೆ ಹೋಗಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್. ಬಿಳ್ಳಪ್ಪ ಮತ್ತು ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠ, ಮಾಲತಿ ಶೆಟ್ಟಿ ಅವರ ಹುಡುಕಾಟಕ್ಕೆ ಸಂಬಂಧಿಸಿದ ವರದಿ ಸಲ್ಲಿಸುವಂತೆ ರಾಜ್ಯ ಗೃಹ ಇಲಾಖೆ, ಕುಂದಾಪುರ ಪೊಲೀಸ್ ಠಾಣೆ ಮತ್ತು ಪಶ್ಚಿಮ ವಿಭಾಗದ ಐಜಿಪಿ ಅಮ್ರತಪಾಲ್ ಅವರಿಗೂ ನಿರ್ದೇಶನ ನೀಡಿದೆ.

Exit mobile version