Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಅಂಗಡಿ ವಸತಿ ಶಾಲೆಯಲ್ಲಿ ಡಾ. ಮನಮೋಹನ್ ಸಿಂಗ್‌ ಅವರಿಗೆ ಶ್ರದ್ಧಾಂಜಲಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಭಾರತದ ಪ್ರಸಿದ್ಧ ಆರ್ಥಿಕ ತಜ್ಞರು ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಡಾ. ಮನಮೋಹನ್ ಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ  ಹಟ್ಟಿಅಂಗಡಿ ವಸತಿ ಶಾಲೆಯಲ್ಲಿ ಡಿ. 27 ರಂದು ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಶಾಲೆಯ ಸಂಯೋಜಕರಾದ ಸವಿತಾ ಭಟ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಹತ್ತು ವರ್ಷಗಳಷ್ಟು ದೀರ್ಘಕಾಲ ಭಾರತದ ಪ್ರಧಾನಿಯಾಗಿದ್ದು, ಕಾಯಕವೇ ಕೈಲಾಸವೆಂದು ಸದಾ ಕಾರ್ಯದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡ ಮಹಾನ್ ಚೇತನ ಮನಮೋಹನ ಸಿಂಗ್. ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಿದವರು. ಮಾಹಿತಿ ತಂತ್ರಜ್ಞಾನ ಕ್ಶೇತ್ರದಲ್ಲಿ ಭಾರತವು ಸಾಧಿಸಿದ ಅಭಿವೃದ್ಧಿಯಲ್ಲಿ ಇವರದ್ದು ಸಿಂಹಪಾಲು. ಮೌನವಾಗಿದ್ದು ಕಾರ್ಯ ನಿರ್ವಹಿಸುವ ಇವರ ಜೀವನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾದುದು.” ಎಂದರು.

ಮನಮೋಹನಸಿಂಗರ ಭಾವಚಿತ್ರಕ್ಕೆ ಪುಷ್ಪಾಂಜಲಿಯೊಂದಿಗೆ ಗೌರವ ನಮನ ಸಲ್ಲಿಸಲಾಯಿತು.

ನಂತರ ಶಾಲೆಯ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಮಾತನಾಡುತ್ತಾ  “ಯಾವುದೇ ವ್ಯಕ್ತಿ ಉತ್ತಮವಾಗಿ ಬೆಳೆಯಬೇಕಾದರೆ ಉತ್ತಮ ವಿದ್ಯಾಭ್ಯಾಸ ಅತ್ಯಗತ್ಯ. ಮನಮೋಹನ್ ಸಿಂಗ್‌ ಅವರ ವಿದ್ಯಾರ್ಥಿಜೀವನ  ಆಕ್ಸ್‌ಫರ್ಡ್‌ನಂತಹ ಜಗದ್ವಿಖ್ಯಾತ ಸಂಸ್ಥೆಯಲ್ಲಿ ನಡೆದಿದ್ದು ಅವರ ಜೀವನದ ಉತ್ಕರ್ಷಕ್ಕೆ ಕಾರಣವಾಯಿತು. ಭಾರತ ಮಾತ್ರವಲ್ಲ. ವಿದೇಶಗಳಲ್ಲಿಯೂ ಆರ್ಥಿಕತಜ್ಞರಾಗಿ ಗುರುತಿಸಿಕೊಂಡಿದ್ದರು. ವಿದ್ಯಾವಂತರಾಗಿ, ಉತ್ತಮ ಕೆಲಸದ ಮೂಲಕ ಜಗದಗಲಕ್ಕೂ ಭಾರತದ ಕೀರ್ತಿಯನ್ನು ಪಸರಿಸಿದ ನಾಯಕರ ಮಧ್ಯೆ ಗುರುತಿಸಲ್ಪಡುವ, ಪರಮಾಣು ಒಪ್ಪಂದದಂತಹ ದಿಟ್ಟ ಹೆಜ್ಜೆಯನ್ನಿರಿಸಿದ ಮಹಾನ್ ನಾಯಕ ಇವರಾಗಿದ್ದಾರೆ. ಮಿತಭಾಷಿಯಾಗಿ, ಆರ್ಥಿಕ ತಜ್ಞನಾಗಿ ಜಗತ್ತಿಗೆ ಹಿತವನ್ನುಂಟುಮಾಡುತ್ತಾ ಸರ್ವರಿಗೂ ಮಾದರಿಯಾಗಿ ಬೆಳೆದವರಿವರು. ಅವರ ಆದರ್ಶಗುಣಗಳನ್ನು ನಮ್ಮದನ್ನಾಗಿಸಿಕೊಂಡು ನಾವೆಲ್ಲ ಈ ನಾಡಿಗೆ ಕೊಡುಗೆ ನೀಡುವಂತಾಗಬೇಕು.” ಎಂದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version