Site icon Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ಕರ್ನಾಟಕ ತಂಡ ಚಾಂಪಿಯನ್ಸ್‌

ಕುಂದಾಪ್ರ ಡ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
 ಮಹಾರಾಷ್ಟ್ರದ ರಾಯಘಢ ಜಿಲ್ಲೆಯ ಕಾಮೋತೆಯಲ್ಲಿ ನಡೆದ  70 ನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

ವಿಜೇತ ತಂಡದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ಮಂದಿ ಆಟಗಾರರು ಭಾಗವಹಿಸಿದ್ದರು. ರಾಜ್ಯ ತಂಡದ ನಾಯಕಿ ಮೇಘನಾ ಎಚ್. ಎಂ.,  ಪಲ್ಲವಿ ಬಿ. ಎಸ್., ಸಹನಾ ಎಚ್. ವೈ,  ಲಕ್ಷ್ಮಿ ದೇವಿ, ತನುಶ್ರೀ, ಗೀತಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ರಾಜ್ಯ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್‌ನ ಪಲ್ಲವಿ ಬಿ.ಎಸ್. ಹಾಗೂ ಸಹನಾ ಎಚ್. ವೈ. ಅವರು ಅಖಿಲ ಭಾರತ ಬಾಲ್‌ಬ್ಯಾಡ್ಮಿಂಟನ್ ಫೆಡರೇಶನ್ ನೀಡುವ ‘ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ’ಗೆ ಭಾಜನರಾದರು.

ಲೀಗ್ ಹಂತದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿದ ಕರ್ನಾಟಕ ನಾಕ್‌ಔಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತ್ತು. ಚಾಂಪಿಯನ್‌ಶಿಪ್‌ನಲ್ಲಿ 28 ರಾಜ್ಯ ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್ಸ್‌ನಲ್ಲಿ ಕರ್ನಾಟಕ ತಂಡವು ಕೇರಳ ತಂಡವನ್ನು 25-35, 35-20, 35-30 ಅಂಕಗಳ ಅಂತರದಲ್ಲಿ ಸೋಲಿಸಿತ್ತು.

ಫೈನಲ್ ಪಂದ್ಯದಲ್ಲಿ ಕರ್ನಾಟಕವು ತಮಿಳುನಾಡು ತಂಡವನ್ನು 35-30, 31-35, 35-26 ಅಂಕಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.  ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.  

Exit mobile version