Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಜಯಂತಿ ಖಾರ್ವಿ, ಉಪಾಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತಿಯ ಮೊದಲ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಜಯಂತಿ ಖಾರ್ವಿ ಮತ್ತು ಉಪಾಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಆಯ್ಕೆಯಾಗಿದ್ದಾರೆ.

ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ (ಮಹಿಳೆ) ಮೀಸಲಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಗಂಗೊಳ್ಳಿ-6 ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಬೆಂಬಲಿತ ಜಯಂತಿ ಖಾರ್ವಿ ಮತ್ತು ಗಂಗೊಳ್ಳಿ-1 ಕ್ಷೇತ್ರದಿಂದ ಗೆದ್ದ ಬಿಜೆಪಿ ಬೆಂಬಲಿತ ರೇಖಾ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಗಂಗೊಳ್ಳಿ-2 ಕ್ಷೇತ್ರದಿಂದ ಗೆದ್ದ ಎಸ್‌ಡಿಪಿಐ ಬೆಂಬಲಿಕ ತಬ್ರೇಜ್ ಮತ್ತು ಗಂಗೊಳ್ಳಿ-1 ಕ್ಷೇತ್ರದಿಂದ ಗೆದ್ದ ಬಿಜೆಪಿ ಬೆಂಬಲಿತ ನಾಗರಾಜ ಖಾರ್ವಿ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಂತಿ ಖಾರ್ವಿ 19 ಮತಗಳನ್ನು ಪಡೆದರೆ ರೇಖಾ ಖಾರ್ವಿ 13 ಮತಗಳನ್ನು ಪಡೆದರು. ಒಂದು ಮತ ಅಸಿಂಧುವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ತಬ್ರೇಜ್ 18 ಮತಗಳನ್ನು ಮತ್ತು ನಾಗರಾಜ ಖಾರ್ವಿ 15 ಮತಗಳನ್ನು ಪಡೆದುಕೊಂಡರು. ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿ ಗೆದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದರು. ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯ ರಿಯಾಜ್ ಅಹಮ್ಮದ್ ಆ್ಯಂಬುಲೆನ್ಸ್‌ನಲ್ಲಿ ಬಂದು ಮತ ಚಲಾಯಿಸಿದರು.

ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ 33 ಸದಸ್ಯ ಬಲವಿದ್ದು ಕಾಂಗ್ರೆಸ್ ಬೆಂಬಲಿತರು 12 ಸ್ಥಾನಗಳಲ್ಲಿ ಎಸ್‌ಡಿಪಿಐ ಬೆಂಬಲಿತರು 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು 12 ಸ್ಥಾನಗಳಲ್ಲಿ ಜಯಗಳಿಸಿ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಚುನಾವಣಾ ಪೂರ್ವದಲ್ಲಿ ಎಸ್‌ಡಿಪಿಐ ಜತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ನಿರೀಕ್ಷೆಯಂತೆ ಉಪಾಧ್ಯಕ್ಷ ಸ್ಥಾನ ಎಸ್.ಡಿ.ಪಿ.ಐಗೆ ಬಿಟ್ಟುಕೊಟ್ಟಿತು.

ಕುಂದಾಪುರ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಿಡಿಒ ಉಮಾಶಂಕರ, ಗ್ರಾಮ ಪಂಚಾಯತಿಯ ನಾರಾಯಣ ಶ್ಯಾನುಭಾಗ್ ಹಾಗೂ ಸಿಬಂದಿ ಸಹಕರಿಸಿದರು.

Exit mobile version