Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಕಿಶೋರ ಯಕ್ಷಗಾನ ಸಂಭ್ರಮದ ಉದ್ಘಾಟನಾ

Oplus_131072

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಈ ನೆಲದ ಸಂಸ್ಕೃತಿಯ ಬೇರಾದ ಯಕ್ಷಗಾನದಂತಹ ಕಲಾ ಪ್ರಕಾರಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಾಗ ನಮ್ಮ ನೆಲದ ಭಾಷೆ ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಯುದಕ್ಕೆ ಸಾಧ್ಯ. ನಮ್ಮ ನೆಲದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ಹೊಂದಿ ಈ ನೆಲದ ಭಾಷೆ ಸಂಸ್ಕೃತಿಯ ಏಳಿಗೆಗೆ ಕಟಿಬದ್ದರಾಗಬೇಕು. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಒಳಗೊಳ್ಳದ ಶಿಕ್ಷಣ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಪೂರವಾಗಿ ಇದ್ದಾಗಲೇ ಮಕ್ಕಳ ಕಲಿಕೆ ಉತ್ತಮವಾಗುತ್ತದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಬೈಂದೂರು ಯಕ್ಷ ಗುರುಕುಲದ ಸಹಯೋಗದಲ್ಲಿ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ರಿ. ಆಯೋಜಿಸಿರುವ ಕಿಶೋರ ಯಕ್ಷಗಾನ ಸಂಭ್ರಮ -2024ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಂತರ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಇದುವರೆಗೂ ಜಿಲ್ಲೆಯಾದ್ಯಂತ ಒಟ್ಟು 91 ಪ್ರೌಢಶಾಲೆಗಳ 2,500 ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆದು ವೇಷ ಮಾಡಿದ್ದಾರೆ. ಇದರಲ್ಲಿ ಮೂರನೇ ಎರಡು ಭಾಗ ಹುಡುಗಿಯರು ಹಾಗೂ ಮೂರನೇ ಒಂದು ಭಾಗ ಹುಡುಗರು. ಸುಮಾರು 400ಕ್ಕೂ ಹೆಚ್ಚು ಮಕ್ಕಳು ಬೇರೆ ಬೇರೆ ಜಿಲ್ಲೆಗಳಿಂದ ಬಂದವರು. 13 ಕ್ರೈಸ್ತ, 10 ಮುಸ್ಲಿಂ ಹಾಗೂ 10 ಬೇರೆ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳೂ ಸೇರಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗೆ ಸಮಾಜವನ್ನು ಒಗ್ಗೂಡಿಸುವ ನಮ್ಮ ಮಣ್ಣಿನ ಕಲೆಯನ್ನು ಉಳಿಸಿ, ಬೆಳೆಸಿ ಮಕ್ಕಳಿಗೆ ಪರಿಚಯಿಸುವಲ್ಲಿ ಯಶಸ್ಸು ಕಾಣುತ್ತಿದ್ದು, ಸಾರ್ಥಕ್ಯ ಭಾವನೆ ಮೂಡುತ್ತಿದೆ ಎಂದರು.

ಹಿರಿಯ ಯಕ್ಷಗಾನ ಕಲಾವಿದ, ಪ್ರಧಾನ ವೇಷಧಾರಿ ಹೇರಂಜಾಲು ಸಂಜೀವ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಯಕ್ಷ ಗುರುಕುಲದ ಸಂಚಾಲಕ ಸುನಿತ್ ಹೊಲಾಡು, ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್‌ನ ನಾರಾಯಣ ಎಂ. ಹಗಡೆ, ಎಚ್. ಎನ್. ಶೃಂಗೇಶ್ವರ್, ಗಣೇಶ ಬ್ರಹ್ಮಾವರ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ ಇದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ನಂತರ ಕಂಬದಕೋಣೆ, ಉಪ್ಪುಂದ, ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕ್ರಮವಾಗಿ ದ್ರೌಪತಿ ಪ್ರತಾಪ, ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

Exit mobile version