Kundapra.com ಕುಂದಾಪ್ರ ಡಾಟ್ ಕಾಂ

ಇಂಜಿನಿಯರ್ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಬೈಂದೂರು ತಾಲೂಕಿನವರಾಗಿದ್ದು, ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ 3.5 ಲಕ್ಷ ರೂ. ವಿದ್ಯಾರ್ಥಿ ಸಹಾಯ ಧನ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನಿಂದ ವಿತರಿಸಲಾಯಿತು.

ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೂರವಾಣಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಜಿ. ಶ್ರೀಧರ ಶೆಟ್ಟಿ ವಂಡ್ಸೆ, ಸಹಾಯ ಧನ ವಿತರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

“ಸಾಮಾಜಿಕ ಧುರೀಣ ದಿವಂಗತ ಗಿಳಿಯಾರು ಕುಶಲ ಹೆಗ್ಡೆ ಅವರು ವಿದ್ಯಾರ್ಥಿಗಳನ್ನು ತುಂಬ ಪ್ರೀತಿಸುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು. ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾಗಿದ್ದು, ವಿಶ್ವಾಸಾರ್ಹವಾದ ಬದುಕು ನಡೆಸುವ ಹೆಜ್ಜೆಯಾಗಿದೆ. ಪೋಷಕರು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸಬೇಕು. ವಿದ್ಯಾರ್ಥಿಗಳೂ ಶಿಕ್ಷಣ ಪೂರೈಸಿ ಸಂಪಾದನೆಯ ಶಕ್ತಿ ಪಡೆದಾಗ ಸಮಾಜ ಮೆಚ್ಚುವಂತೆ ಜೀವನದಲ್ಲಿ ಸಾಧನೆ ಮಾಡಬೇಕು.” ಎಂದರು.

ಹಿರಿಯ ವಕೀಲರಾದ ಜಿ. ಸಂತೋಷ ಕುಮಾರ್ ಶೆಟ್ಟಿ ಮಾತನಾಡಿ, “ಹೆತ್ತವರು ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಟ್ಟು ಉನ್ನತ ಶಿಕ್ಷಣ ಒದಗಿಸಿದಾಗ ಅವರು ಹೆಮ್ಮೆ ಪಡುವಂತೆ, ಸಮಾಜ ಗೌರವ ಪಡುವಂತೆ ಸಾಧನೆ ಮಾಡುವ ಪ್ರಯತ್ನ ಮಾಡಬೇಕು. ಆರ್ಥಿಕ, ಸಾಮಾಜಿಕವಾಗಿ ಹಿನ್ನಡೆ ಸುಧಾರಿಸಿಕೊಂಡು ಮಹತ್ವದ ಸಾಧನೆ ಮಾಡಿದವರು ತುಂಬ ಮಂದಿ ಇದ್ದಾರೆ. ದಿ| ಗಿಳಿಯಾರು ಕುಶಲ ಹೆಗ್ಡೆಯವರದ್ದು ಅನುಕರಣೀಯ, ಆದರ್ಶ ಜೀವನವಾಗಿತ್ತು.” ಎಂದರು.

ಗಿಳಿಯಾರು ಕುಶಲ ಹೆಗ್ಡೆ ದತ್ತಿನಿಧಿ ಸಂಸ್ಥೆಯ ಖಜಾಂಚಿ ಸ್ನೇಹಾ ರೈ ಶುಭ ಹಾರೈಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಯು. ಎಸ್. ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶ್ವಸ್ಥರಾದ ಕೆ. ನಾರಾಯಣ ಅರ್ಹ ವಿದ್ಯಾರ್ಥಿಗಳ ವಿವರ ನೀಡಿದರು.

Exit mobile version