ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕ್ರಿಯೇಟಿವ್ ಪಪೂ ಕಾಲೇಜು, ಕಾರ್ಕಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ಸಿದ್ಧಾಪುರ, ಶೈಕ್ಷಣಿಕ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಶಿಬಿರ – 2025ರ ಉದ್ಘಾಟನೆಗೊಳಿಸಲಾಯಿತು.
ಶಿರಸಿಯ ಸಿದ್ಧಾಪುರ ಕಾನಸೂರಿನಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶಿಬಿರಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಉದ್ಘಾಟಕರಾಗಿ ಆಗಮಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ಮಾತನಾಡಿ, ಹತ್ತನೆಯ ತರಗತಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏನಾಗಬೇಕೆಂದು ಕನಸು ಕಾಣುತ್ತಾರೋ ಅದನ್ನು ನನಸು ಮಾಡಲು ಮುಂದಿನ ಪಿ.ಯು.ಸಿ ಶಿಕ್ಷಣ ಅತ್ಯಂತ ಪ್ರಮುಖವಾದದ್ದು. ದೂರದರ್ಶಿತ್ವದೊಂದಿಗೆ ಮುಂದಿನ ಹೆಜ್ಜೆ ಇರಿಸಿ, ಉತ್ತಮ ಫಲಿತಾಂಶವೂ ಇಂತಹ ಶಿಬಿರಗಳಿಂದ ದೊರಕುತ್ತದೆ. ಶಿರಸಿ – ಸಿದ್ಧಾಪುರದ ಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್. ನಾಯ್ಕ ಅವರು ಮುಂದಿನ ಶೈಕ್ಷಣಿಕ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನಿಯಾಗಿ ಮೂಡಿಬರುವಂತೆ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳೆಲ್ಲರೂ ಏಕಾಗ್ರತೆಯಿಂದ ಓದಿ, ಈ ಶಿಬಿರದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಕಾನಸೂರು ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಸುಧಾಕರ ಎನ್. ನಾಯ್ಕ, ಜಿಲ್ಲೆಯ ಎಲ್ಲ ಶಿಕ್ಷಕರ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.