Site icon Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಚುನಾವಣೆ: ಮೇಲುಗೈ ಸಾಧಿಸಿದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ರೈತಶಕ್ತಿ ಸಹಕಾರಿ ಒಕ್ಕೂಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜ.12:
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ರೈತಶಕ್ತಿ ಸಹಕಾರಿ ಒಕ್ಕೂಟ 13ರಲ್ಲಿ 11 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ.

ರೈತಶಕ್ತಿ ಸಹಕಾರಿ ಒಕ್ಕೂಟದಲ್ಲಿ ಸಾಮಾನ್ಯ ಕ್ಷೇತ್ರದಿಂದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಗುರುರಾಜ ಹೆಬ್ಬಾರ್, ಪ್ರಕಾಶ್ ಎನ್. ಪೂಜಾರಿ, ಮಂಜು ದೇವಾಡಿಗ, ರಾಜೇಶ್ ದೇವಾಡಿಗ, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಉದಯ್ ಕುಮಾರ್ ಶೆಟ್ಟಿ, ಮಹಿಳಾ ಮೀಸಲು ಕ್ಷೇತ್ರದಿಂದ ದಿನಿತಾ ಶೆಟ್ಟಿ, ಕೆ. ಲೀಲಾ ಪೂಜಾರಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಈಶ್ವರ ಹಕ್ಲತೋಡು, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಹೂವ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರಕ್ಕೆ ಮೋಹನ್ ಪೂಜಾರಿ ಅವರು ಅವಿರೋಧ ಆಯ್ಕೆಯಾಗಿದ್ದರು. ರೈತಬಂಧು ಒಕ್ಕೂಟದಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಿ.ಎಸ್. ಸುರೇಶ್ ಶೆಟ್ಟಿ, ಭರತ್ ದೇವಾಡಿಗ ಆಯ್ಕೆಯಾಗಿದ್ದಾರೆ.

ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಘದ ಚುನಾವಣೆ ನಡೆದಿದ್ದು ಚುನಾವಣಾ ಅಧಿಕಾರಿಯಾಗಿ, ರೋಹಿತ್ ಕುಮಾರ್ ಚುನಾವಣೆಯನ್ನು ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸಹಕರಿಸಿದರು.

ಭಾರಿ ಪೈಪೋಟಿ ಇದ್ದುದರಿಂದ ಮತದಾರ ಓಲೈಕೆಗೆ ಸಂಬಂಧಿಸಿದಂತೆ ಬೆಳಿಗ್ಗೆ ಉಭ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Exit mobile version