Kundapra.com ಕುಂದಾಪ್ರ ಡಾಟ್ ಕಾಂ

ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ʼಲಕ್ಷ್ಯʼ ಕಾರ್ಯಾಗಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ:
ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ಎಸ್. ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಲಕ್ಷ್ಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ ಕುಂದಾಪುರ ವಲಯದ ಶಿಕ್ಷಣ ಸಂಯೋಜಕರು ಹಾಗೂ ತಾಲೂಕು ಎಸ್. ಎಸ್.ಎಲ್.ಸಿ ನೋಡೆಲ್ ಶೇಖರ್ ಪಡುಕೋಣೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ  ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ,  ಬದಲಾಗುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಹೊಂದಿಕೊಂಡು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಗುಣಮಟ್ಟದ ಫಲಿತಾಂಶವನ್ನು ಪಡೆಯಲು ನಿರಂತರ ಅಭ್ಯಾಸ, ಮನನ, ಆಸಕ್ತಿಯುತ ಕಲಿಕೆ ಪ್ರಮುಖ ವಾಗಿರುತ್ತದೆ ಆದ್ದರಿಂದ ಮುಂಬರುವ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ  ಕಠಿಣ ಪರಿಶ್ರಮದಿಂದ ಪರೀಕ್ಷಾ ಭಯವನ್ನು ಬಿಟ್ಟು ಗುಣಮಟ್ಟದ ಫಲಿತಾಂಶವನ್ನು ಪಡೆಯಬೇಕು ಎಂದರು.

ಪಾಲಕರು ಈ ದಿಸೆಯತ್ತ ತಮ್ಮ ಮಕ್ಕಳಿಗೆ ಸಂಪೂರ್ಣ ಸಹಕಾರವನ್ನು ನೀಡಿ ಮನೆಯಲ್ಲಿ ಪೂರಕ ಕಲಿಕಾ ವಾತಾವರಣವನ್ನು ನಿರ್ಮಿಸಿ ಮಕ್ಕಳನ್ನು ಹಂತ ಹಂತವಾಗಿ ಅವಲೋಕಿಸಿ ಅವರನ್ನು ಕಲಿಕೆಯತ್ತ ಮನವೊಲಿಸುವಂತೆ ಕಿವಿಮಾತು ಹೇಳಿದರು ಹಾಗೂ ಸದಾ ಗುಣಮಟ್ಟದ ಫಲಿತಾಂಶವನ್ನು ಪಡೆಯುತ್ತಿರುವ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಮದರ್ ತೆರೇಸಾಸ್ ಪಿ.ಯು ಕಾಲೇಜಿನ ಅನುಭವಿ ಜೆ. ಇ. ಇ ಕೊರ್ಡಿನೆಟರ್ ಮತ್ತು ಸಂಪನ್ಮೂಲ ತರಬೇತುದಾರರಾದ  ನಿರ್ಮಲಾ ಕುಮಾರಿ.ಬಿ. ಎಸ್. ಎಸ್. ಎಲ್.ಸಿ. ನಂತರ ಪಿಯುಸಿ ಪಠ್ಯವಿಷಯದ ಆಯ್ಕೆಗೆ ಇರುವ ಗೊಂದಲ ಹಾಗೂ  ಗಣಿತ  ಮತ್ತು ಭೌತಶಾಸ್ತ್ರ ಸಂಯೋಗದೊಂದಿಗೆ ಔದ್ಯೋಗಿಕವಾಗಿ ದೊರಕುವ ಅವಕಾಶಗಳ ಕುರಿತು ಮನೋಜ್ಞವಾಗಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ತಿಳಿಸಿದರು.

ರಾಷ್ಟ್ರಮಟ್ಟದ ಅನುಭವಿ ನೀಟ್ ತರಬೇತುದಾರರು ಹಾಗೂ ಮದರ್ ತೆರೇಸಾಸ್ ಪಿ.ಯು ಕಾಲೇಜಿನ ನೀಟ್ ಸಂಯೋಜಕರಾದ ವಿಕಿ ವಾಸ್ವಾನಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಜೀವಶಾಸ್ತ್ರ ವಿಷಯದೊಂದಿಗೆ ಪಿಯುಸಿಯಲ್ಲಿ ಪಿ.ಸಿ.ಎಮ್. ಬಿ ಸಂಯೋಗದಲ್ಲಿ ಇರುವ ಬಹು ಆಯ್ಕೆ ಮತ್ತು ಔದ್ಯೋಗಿಕವಾಗಿ ಲಭ್ಯವಿರುವ ವಿಪುಲ ಅವಕಾಶಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿ ಈಗಾಗಲೇ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಫೌಂಡೇಶನ್ ತರಗತಿ ಪಿಯುಸಿಗೆ ಹೇಗೆ ಅತ್ಯಂತ ಉಪಯೋಗಕರ ಎನ್ನುವ ಕುರಿತು ತಿಳಿಸಿದರು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷೆಯಾದ ಶಮಿತಾ ರಾವ್ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನು ಹೆಚ್ಚಿನ ಜೆ. ಇ. ಇ , ನೀಟ್, ಮತ್ತು ಸಿ.ಇ.ಟಿ ಅನುಭವಿ ತರಬೇತುದಾರರನ್ನು ನೇಮಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಎಂದು ಪಾಲಕರ ಸಹಕಾರವನ್ನು ಸ್ಮರಿಸಿದರು.  ಆಡಳಿತ ಮಂಡಳಿಯ ಅಧಿಕಾರಿ ರೆನಿಟಾ ಲೋಬೊ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಮುಖ್ಯಶಿಕ್ಷಕ ಡಾ. ರವಿದಾಸ್ ಶೆಟ್ಟಿ ಪ್ರಸ್ತಾವಿಸಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. 

ಶಿಕ್ಷಕ ಜಗದೀಶ್ ಸ್ವಾಗತಿಸಿ, ಶಿಕ್ಷಕರಾದ ಅವಿನಾಶ್ ಮತ್ತು ವೈಶಾಲಿ ಶೆಟ್ಟಿ ವಂದಿಸಿ, ಶಿಕ್ಷಕಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

Exit mobile version