Site icon Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ: ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವು ಸಂಪನ್ನಗೊಂಡಿತ್ತು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಲೇಖಕಿ, ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಪಾರ್ವತಿ ಜಿ. ಐತಾಳ್ ಅವರು ವಿಜೇತರಿಗೆ ಬಹುಮಾನ ವಿತರಿಸಿ, ಮಾತೃಭಾಷೆ ಹಾಗೂ ಆಂಗ್ಲ ಭಾಷೆಗಳ ಮಹತ್ವವನ್ನು ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿದರು. ನಾಲ್ಕು ಗೋಡೆಗಳ ನಡುವೆ ಕಲಿಯುವುದಷ್ಟೇ ಶಿಕ್ಷಣವಲ್ಲಾ ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅತಿ ಅವಶ್ಯಕವಾಗಿದೆ. ಬಹುಮಾನಗಳಿಸುವುದೇ ಮುಖ್ಯವಲ್ಲ ಸ್ಪರ್ಧೆಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಿರುವುದು ತುಂಬಾ ಮುಖ್ಯವಾಗುತ್ತದೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವು ಸಾಧನೆಯ ಪಥದಲ್ಲಿ ಸಾಗಲು ಪೂರಕವಾಗಿದ್ದು, ಈ ಶಾಲೆಯಲ್ಲಿ ಅದಕ್ಕೆ ಒತ್ತು ನೀಡಲಾಗುತ್ತಿರುವುದನ್ನು ನೋಡಿ ಪ್ರಶಂಶಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರು ವಹಿಸಿದ್ದು, ಶಾಲಾ ಆಡಳಿತಾಧಿಕಾರಿಯವರಾದ ವೀಣಾರಶ್ಮಿ ಎಂ., ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ್, ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಜ್ಯೋತಿ ಸ್ವಾಗತಿಸಿ, ಶಿಕ್ಷಕಿ ರೂಪಾಮಣಿ ಅವರು ನಿರೂಪಿಸಿ, ವಿಜೇತರ ಪಟ್ಟಿಯನ್ನು ಶಿಕ್ಷಕಿಯರಾದ ಸುಪ್ರಿಯಾ, ಸುಮಿತ್ರಾ, ಶುಭಾ ಮತ್ತು ಅನುರಾಧಾ ವಾಚಿಸಿದರು.

Exit mobile version