ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಒಂದು ಶಾಲೆಯಲ್ಲಿ ಅಧ್ಯಾಪಕರು, ಎಸ್‌ಡಿಎಂಸಿ, ವಿದ್ಯಾರ್ಥಿಯಿಂದ ಶಾಲೆಯ ಕೀರ್ತಿ ಬೆಳಗಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ಬೌದ್ಧಿಕ ಮಟ್ಟವನ್ನು ಗಮನಿಸುತ್ತಿರಬೇಕು. ಪಾಲಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ಬೇರೆಯವರೊಂದಿಗೆ ಹೋಲಿಸಬಾರದು. ಗುಜ್ಜಾಡಿ ಶಾಲೆಯ ಬೆಳವಣಿಯಲ್ಲಿ ಎಸ್‌ಡಿಎಂಸಿ ಪಾತ್ರ ಗಣನೀಯವಾಗಿದೆ. ಸಾಕಷ್ಟು ಅಭಿವೃದ್ಧಿ ಪರ ಚಿಂತನೆಯನ್ನಿಟ್ಟುಕೊಂಡು ಹಳೆ ವಿದ್ಯಾರ್ಥಿ ಸಂಘದ ಮೂಲಕ ಶಾಲೆಯನ್ನು ಗುಣಾತ್ಮಕ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದೆ ಎಂದು ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಹೇಳಿದರು.
ಬೈಂದೂರು ವಲಯದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 105ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಎಲ್.ಮೇಸ್ತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಶುಭಾಶಂಸನೆಗೈದರು. ಶಾಲೆಯ ಹಳೆ ವಿದ್ಯಾರ್ಥಿ ನಾಗರತ್ನ ಅಶೋಕ ಸ್ವಸ್ತಿ ವಾಚನಗೈದರು. ಶೈಕ್ಷಣಿಕ ಮತ್ತು ಪಾಠೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕ ಸುಜಿತ್ ಎಸ್. ಪೂಜಾರಿ, ಎಸ್‌ಡಿಎಂಸಿ ಸದಸ್ಯರು, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ಗಾಯತ್ರಿ ಕೊಡಂಚ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗಂಗಾಧರ ಬಂಟ ವರದಿ ವಾಚಿಸಿದರು. ಸಹಶಿಕ್ಷಕರಾದ ಸುಮನಾ ನಾಯ್ಕ್, ಜಿ.ಕೆ.ವಿಶಾಲಾಕ್ಷಿ, ಸುಚೇತಾ ಎಸ್.ಮಿಜಾರ್ ಮತ್ತು ವಿಶ್ವನಾಥ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹ ಶಿಕ್ಷಕ ಶ್ರೀಧರ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕ ಭರಮಪ್ಪ ಹಡಪಾದ ವಂದಿಸಿದರು.

