Site icon Kundapra.com ಕುಂದಾಪ್ರ ಡಾಟ್ ಕಾಂ

ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡದ ಕೊಡುಗೆ ಅಪಾರ: ಡಾ. ಹರಿಕೃಷ್ಣ ಪುನರೂರು

??????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡದ ಕೊಡುಗೆ ಅಪಾರ. ಇಂದು 7 ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕು ಎಂದು ಡಾ. ಹರಿಕೃಷ್ಣ ಪುನರೂರು ಅವರು ಹೇಳಿದರು.

ಅವರು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆದ ಗೊಂಬೆಯಾಟ ಅಕಾಡೆಮಿಯ 10ನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2024ರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಎಲ್. ಸಾಮಗರು ಅವರು ಸಮಾರಂಭವನ್ನು ಉದ್ಘಾಟಿಸಿ, ಯಕ್ಷಗಾನದ ಇತಿಹಾಸಕ್ಕಿಂತ ಗೊಂಬೆಯಾಟ ಕಲೆಯೇ ಪುರಾತನವಾದದ್ದು ಎಂದು ಅಭಿಪ್ರಾಯಪಟ್ಟರು.

ಗಂಗೊಳ್ಳಿ ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿಯಿಂದ ವಿಷ್ಣು ಸಹಸ್ರನಾಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗೊಳ್ಳಿಯ ಡಾ. ಕಾಶೀನಾಥ್ ಪೈ ಅವರು ಪ್ರಾರ್ಥಿಸಿದರು.

ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಕುಂದಾಪುರದ ಮೊಕ್ತೇಸರರಾದ ರಾಧಾಕೃಷ್ಣ ಶೆಣೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತಲ್ಲೂರು ಇದರ ಮೊಕ್ತೇಸರ ವಸಂತ ಆರ್. ಹೆಗ್ಡೆ, ಓಂ ಗಣೇಶ್ ಟ್ರಾಕ್ಟರ್ಸ್‌ ಶಿವಮೊಗ್ಗದ ಆಡಳಿತ ಪಾಲುದಾರ ಭಾಸ್ಕರ್ ಜಿ. ಕಾಮತ್, ಎಸ್. ವಿ. ಪದವಿಪೂರ್ವ ಕಾಲೇಜು, ಗಂಗೊಳ್ಳಿ ಇದರ ಉಪನ್ಯಾಸಕ ಸುಜಯೀಂದ್ರ ಹಂದೆ ಅವರು ಉಪಸ್ಥಿತರಿದ್ದರು.

ಪಾಕಶಾಲೆಯನ್ನು ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ವಿಲಾಸಿನಿ ಉಡುಪಿ ಬಾಬುರಾಯ ಶೆಣೈ ಅವರು ಉದ್ಘಾಟಿಸಿದರು. ಅಕಾಡೆಮಿಯು ವರ್ಷಂಪ್ರತಿ ಕೊಡಮಾಡುವ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ-2024ನ್ನು ಬಹುಮುಖ ಪ್ರತಿಭೆಯ ಕಲಾವಿದ ಓಂ ಗಣೇಶ್ ಉಪ್ಪುಂದ ಅವರಿಗೆ ನೀಡಲಾಯಿತು. ಪ್ರಶಸ್ತಿ ಪತ್ರವನ್ನು ರಾಜೇಂದ್ರ ಪೈ ವಾಚಿಸಿದರು.

ಇದೇ ವೇದಿಕೆಯಲ್ಲಿ ಧಾರ್ಮಿಕ ಕ್ಷೇತ್ರದ ಧುರೀಣ ವಸಂತ ಆರ್. ಹೆಗ್ಡೆ, ಹಿಂದೂಸ್ತಾನಿ ಸಂಗೀತದಲ್ಲಿ ವಿದ್ವಾನ್ ಪದವಿ ಗಳಿಸಿದ ವಿದ್ವಾನ್ ಡಾ. ಹೆಚ್. ಆರ್. ಹೆಬ್ಬಾರ್, ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗಳಿಸಿದ ಶಿಶಿರ ಶಂಕರ ಪೂಜಾರಿ ಹಾಗೂ ಬಾಲ ಚಿತ್ರ ಕಲಾವಿದ ವಿವೇಕ್ ಭಟ್ ರನ್ನು ಸನ್ಮಾನಿಸಲಾಯಿತು. ರಾಜಶ್ರೀ ಆರ್. ಪೈ ಮತ್ತು ಎಮ್. ರತ್ನಾಕರ ಪೈ ಅವರು ಶ್ರೀ ಗಣೇಶ ಯಕ್ಷಗಾನ ಮಂಡಳಿ, ಉಪ್ಪಿನಕುದ್ರು ಇದರ ಚಂಡೆಗಾರ ಶಂಕರ ಕುಮಾರ ಮೊಗವೀರ ಅವರಿಗೆ ಗೃಹ ನಿರ್ಮಾಣದ ಬಗ್ಗೆ ಧನಸಹಾಯ ನೀಡಿದರು.

ಪ್ರತೀಕ್ಷಾ ಕಾಮತ್ ಅವರು ದೀಕ್ಷಾಳಿಗೆ ಹಾಗೂ ಸಹನಾ ಶ್ರೀಲತಾ ನಾಯಕ್ ಮುಂಬಯಿ ಅವರು ಸಮೀಕ್ಷಾಳಿಗೆ ಶಾಲಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಉಪ್ಪಿನಕುದ್ರು ನಿವಾಸಿ ವಾಸುದೇವ ಆಚಾರ್ ಅವರಿಗೆ ಗಂಗೊಳ್ಳಿ ಜಿ. ಜಯಂತಿ ಗಣಪತಿ ಸೇರುಗಾರ್ ಅವರು ವೈದ್ಯಕೀಯ ನೆರವು ನೀಡಿದರು. ಸ್ಥಳಿಯ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಏರ್ಪಡಿಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ವಿತರಿಸಲಾಯಿತು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಜನಾರ್ಧನ ಹಂದೆ ಮಂಗಳೂರು ಇವರ ಗೀತೆಗಳು, ವಸಂತಿ ಆರ್. ಪಂಡಿತ್ ಅವರ ದೇವರ ನಾಮ, ಪೂಜಾ ಭಟ್ ಹಾಗೂ ಶ್ರೀ ಲಕ್ಷ್ಮೀ ವೆಂಕಟರಮಣ ಮಹಿಳಾ ಮಂಡಳಿ ಚೇಂಪಿ ಅವರ ಕುಣಿತದ ಭಜನೆ, ತಲ್ಲೂರಿನ ಅಂಗನವಾಡಿ ಕೇಂದ್ರ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಮತ್ತು ಸ್ಥಳೀಯ ವಿದ್ಯಾರ್ಥಿಗಳ ನೃತ್ಯ ವೈಭವ ನೆರೆದ ಪ್ರೇಕ್ಷರನ್ನು ರಂಜಿಸಿತು.

ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ನಿರೂಪಿಸಿ, ನಿವೃತ್ತ ಶಿಕ್ಷಕ ಉದಯ ಭಂಡಾರ್‌ಕಾರ್ ಅವರು ವಂದಿಸಿದರು.

Exit mobile version