ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅವಿಭಕ್ತ ಕುಟುಂಬ ವ್ಯವಸ್ಥೆಯು ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯ ಭಾಗವಾಗಿದೆ. ಈ ವ್ಯವಸ್ಥೆಯಲ್ಲಿ ಕುಟುಂಬದ ಸದಸ್ಯರಲ್ಲಿ ನಾವು ನಮ್ಮವರು ಎಂಬ ಭಾವನೆ ಮೂಡಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಸಹಕಾರ ಮನೋಭಾವದಿಂದ ಜೀವನ ಸಾಗಿಸುತ್ತಾರೆ. ಇದು ಉತ್ತಮ ಸಮಾಜ ಮುನ್ನಡೆಗೆ ಸಹಾಯವಾಗುತ್ತದೆ. ಇಲ್ಲಿ ಯಾರಿಗಾದರೂ ಸಮಸ್ಯೆ ಎದುರಾದರೇ ಆಡಳಿತ ಮಂಡಳಿ ಮತ್ತು ಎಲ್ಲರೂ ಜೊತೆಗೆ ನಿಂತು ಸಹಕರಿಸುತ್ತಾರೆ ಎಂದು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ರಿ. ಇದರ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಹೇಳಿದರು.
ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ತ್ರಿಷಿಕಾಳ ಹೃದಯ ಶಸ್ತ್ರ ಚಿಕಿತ್ಸೆಗೆ ಶಾಲಾ ಆಡಳಿತ ಮಂಡಳಿ, ಪೋಷಕರು, ಶಿಕ್ಷಕ – ಶಿಕ್ಷಕೇತರ ವೃಂದದವರು ನೀಡಿದ ದೇಣಿಗೆ ಸಹಾಯಧನ ಒಟ್ಟು 3,01,465 ರೂಪಾಯಿಗಳನ್ನು ಬಾಲಕಿಯ ತಾಯಿಗೆ ಹಸ್ತಾಂತರಿಸಿ ಮಾತನಾಡಿದರು.
ಶಾಲೆಯೂ ಕೂಡ ಒಂದು ತುಂಬು ಕುಟುಂಬಕ್ಕೆ ಉದಾಹರಣೆಯಾಗಿದ್ದು, ಇಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು, ಆಡಳಿತ ಮಂಡಳಿ, ಬೋಧಕೇತರ ಸಿಬ್ಬಂದಿಗಳು ಇಡೀ ಕುಟುಂಬದ ಸದಸ್ಯರಾಗಿದ್ದಾರೆ. ಅಂತೆಯೇ ನಮ್ಮ ಸಂಸ್ಥೆಯೂ ಹಿಂದಿನಿಂದಲೂ ಈ ಸಹಕಾರ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ರೀತಿ ಸಹಕಾರ ಮತ್ತು ಹೊಂದಾಣಿಕೆಯಿಂದ ಸಂಸ್ಥೆಗಳು ಉತ್ತಮವಾಗಿ ಮುನ್ನೆಡೆಯಲು ಸಾಧ್ಯವಾಗುತ್ತದೆ ಎಂದರು.
ಶಾಲೆಯ ವಿದ್ಯಾರ್ಥಿನಿಯ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಸಹಕರಿಸಿದ ಶಾಲೆಯ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯ ಶಿಕ್ಷಕ ಪ್ರದೀಪ್ ಕೆ. ಮತ್ತು ಶಿಕ್ಷಕ ವೃಂದದವರು ಕೃತಜ್ಞತೆ ಸಲ್ಲಿಸಿದರು.

