ಮತ್ತೆ ಬಂದಿದೆ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಕಳೆದ 12ವರ್ಷಗಳಿಂದ ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ನಿರಂತರವಾಗಿ ನುಡಿಸಿರಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ತನ್ನದೇ ಆದ ಸೇವೆ ನೀಡುತ್ತಿದೆ. ಈ ಭಾರಿಯ ಕಾರ್ಯಕ್ರಮವು ನವೆಂಬರ್ 26, 27, 28 ಮತ್ತು 29ರಂದು ನಾಲ್ಕು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷತೆಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆ.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಜನಿಸಿದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರೊಫೆಸರರಾಗಿ, ವಿಭಾಗ ನಿರ್ದೇಶಕರಾಗಿ ಕಲಾವಿಭಾಗದ ಡೀನ್ ಆಗಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಹಾಗೂ ಈ ಶತಮಾನದ ಹಿರಿಯ ವಿದ್ವಾಂಸರು. ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ನಿಘಂಟು ಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಲ್ಲಿ ಮೇರು ಪಂಡಿತರು. ಕನ್ನಡ ಸಂಶೋಧನಾ ಕ್ಷೇತ್ರದ ಗಣ್ಯ ಹಾಗೂ ಚಿರಸ್ಮರಣೀಯ ಹೆಸರುಗಳಲ್ಲಿ ವೆಂಕಟಾಚಲ ಶಾಸ್ತ್ರಿಯವರ ಹೆಸರು ಅಗ್ರಗಣ್ಯವಾದುದು. ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಆಳ್ವಾಸ್ ನುಡಿಸಿರಿ ೨೦೧೫ರ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟು ಮಾಡಿದೆ.
ಆಳ್ವಾಸ್ ನುಡಿಸಿರಿ 2015ರ ಉದ್ಘಾಟನೆಗೆ ಡಾ.ವೀಣಾ ಶಾಂತೇಶ್ವರ.
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ 39 ವರ್ಷಗಳ ಸುದೀರ್ಘ ಕಾಲ ಇಂಗ್ಲಿಷ್ ಭಾಷಾ ಪ್ರಾಧ್ಯಾಪಿಕೆಯಾಗಿ, ಅದೇ ಕಾಲೇಜಿನಲ್ಲಿ ಒಂಬತ್ತು ವರ್ಷಗಳ ಕಾಲ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದವರು. ಖ್ಯಾತ ಕತೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಸಂಘಟಕರಾಗಿ, ಉತ್ತಮ ಆಡಳಿತಗಾರರಾಗಿ ಹೆಸರುವಾಸಿಯಾದವರು. ಸ್ತ್ರೀ ಸಂವೇದನೆಯ ಬರಹಗಾರರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಡಾ.ವೀಣಾ ಶಾಂತೇಶ್ವರರು ಆಳ್ವಾಸ್ ನುಡಿಸಿರಿ ೨೦೧೫ರ ಉದ್ಘಾಟನೆಯನ್ನು ನೆರವೇರಿಸಿ ಕೊಡಲಿರುವುದು ನಮಗೆ ಹರ್ಷವನ್ನುಂಟುಮಾಡಿದೆ.
ನುಡಿಸಿರಿ ಉದ್ಘಾಟನೆಗೆ ನೂತನ ವೇದಿಕೆ
ನವೆಂಬರ್ 26 ರಂದು ಸಂಜೆ ಗಂಟೆ 6ಕ್ಕೆ ಆಳ್ವಾಸ್ ನುಡಿಸಿರಿಯ ಉದ್ಘಾಟನೆಯು ಅದಕ್ಕೆಂದೇ ನಿರ್ಮಾಣವಾದ ವೇದಿಕೆಯಲ್ಲಿ ನಡೆಯಲಿದೆ. ಸುಮಾರು 20,000 ಪ್ರೇಕ್ಷಕರು ನೋಡಿ ಆನಂದಿಸಬಹುದಾದ ಬೃಹತ್ ಸಭಾಂಗಣವು ಇದಾಗಿದೆ. ಉಳಿದಂತೆ, 27, 28, 29ನೇ ದಿನಾಂಕಗಳಂದು ‘ಕರ್ನಾಟಕ : ಹೊಸತನದ ಹುಡುಕಾಟ’ ಎನ್ನುವ ಪ್ರಧಾನ ಪರಿಕಲ್ಪನೆಯಲ್ಲಿ ವಿವಿಧ ಗೋಷ್ಠಿಗಳು, ಸಂಸ್ಮರಣೆ, ಕವಿಸಮಯ-ಕವಿನಮನ, ವಿಶೇಷೋಪನ್ಯಾಸಗಳು ರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ನಡೆಯಲಿವೆ. 29ನೇ ದಿನಾಂಕದಂದು 3:30 ಗಂಟೆಗೆ ಸಮಾರೋಪ ಸಮಾರಂಭವು ಜರುಗಲಿದೆ.
ವಿದ್ಯಾರ್ಥಿ ಪ್ರತಿನಿಧಿಗಳು ಪ್ರತಿನಿಧಿ ಶುಲ್ಕವಿಲ್ಲದೆ, ಸಂಪೂರ್ಣ ಉಚಿತವಾಗಿ ನಾಲ್ಕು ದಿನಗಳ ಈ ಸಮ್ಮೇಳನದಲ್ಲಿ ಊಟೋಪಚಾರ-ವಸತಿ ವ್ಯವಸ್ಥೆಯ ಸೌಲಭ್ಯವನ್ನು ಪಡೆದುಕೊಂಡು ಭಾಗವಹಿಸಬಹುದು. ಉಳಿದಂತೆ ಇತರ ಪ್ರತಿನಿಧಿಗಳು 100 ರೂ. ಪ್ರತಿನಿಧಿ ಶುಲ್ಕದೊಂದಿಗೆ ನಾಲ್ಕು ದಿನಗಳ ಕಾಲದ ಈ ಸಮ್ಮೇಳನವನ್ನು ಸದುಪಯೋಗಪಡಿಸಿಕೊಳ್ಳಬಹುದು. ನಾಡಿನ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು, ಕವಿಗಳು ಭಾಗವಹಿಸುವ ಈ ಸಮ್ಮೇಳನವನ್ನು ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕ ಡಾ| ಎಂ. ಮೋಹನ ಆಳ್ವ ಕೇಳಿಕೊಂಡಿದ್ದಾರೆ.