Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2015

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವು ನವಂಬರ್ ತಿಂಗಳ 26, 27, 28 ಮತ್ತು 29ರ ದಿನಾಂಕಗಳಂದು 4 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭವು ’ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್’ ವೇದಿಕೆಯಲ್ಲಿ ನವಂಬರ್ 26ರಂದು ಮುಸ್ಸಂಜೆ 6.00 ಗಂಟೆಗೆ ನೆರವೇರಲಿದೆ. ಉಳಿದಂತೆ 3 ದಿನಗಳ ಸಮ್ಮೇಳನವು ಪ್ರತಿವರ್ಷದಂತೆ ರತ್ನಾಕರವರ್ಣಿ ವೇದಿಕೆಯಲ್ಲಿ, ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಲಿದೆ.

[quote font_size=”14″ bgcolor=”#ffffff” arrow=”yes” align=”right”]ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಸರ್ವಾಧ್ಯಕ್ಷರು:
ಈ ಶತಮಾನದ ಹಿರಿಯ ವಿದ್ವಾಂಸರು ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರು. 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಇವರು. ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ನಿಘಂಟುಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಲ್ಲಿ ಮೇರುಪಂಡಿತರಿವರು. ಕನ್ನಡ ಸಂಶೋಧನಾ ಕ್ಷೇತ್ರದ ಗಣ್ಯ ಹಾಗೂ ಚಿರಸ್ಮರಣೀಯರಲ್ಲಿ ಇವರೂ ಒಬ್ಬರು.[/quote]

ಉದ್ಘಾಟನೆಗೆ ಬೃಹತ್ ವೇದಿಕೆ:
ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭವನ್ನು ಅತೀ ಹೆಚ್ಚು ಜನರು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುವುದಕ್ಕೆ ಹೊಸ ’ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್’ ವೇದಿಕೆಯನ್ನು ನಿರ್ಮಿಸಲಾಗಿದೆ. 150 ಅಡಿ ಉದ್ದ 40 ಅಡಿ ಅಗಲದ ಬೃಹತ್ ವೇದಿಕೆ ಇದಾಗಿದ್ದು ಈ ರಂಗ ಮಂದಿರದಲ್ಲಿ 35,000 ವೀಕ್ಷಕರು ಆಸೀನರಾಗಿ ಸಮ್ಮೇಳನವನ್ನು ವೀಕ್ಷಿಸಬಹುದಾಗಿದೆ. ಇದಕ್ಕಾಗಿಯೇ ಈ ವರ್ಷ ಒಂದು ದಿನವನ್ನು ಹೆಚ್ಚುವರಿಯಾಗಿ ಬಳಸಿಕೊಂಡು ಸಮ್ಮೇಳನವು ನಾಲ್ಕು ದಿನಗಳಿಗೆ ವಿಸ್ತರಣೆಗೊಂಡಿದೆ.

ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಸಮ್ಮೇಳನ, ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ ಸಭಾಂಗಣ:
ಗಡಿನಾಡಿನ ಕ್ರಾಂತಿಯ ಕಿಡಿ, ಹೊರಾಟಗಾರ ಶತಾಯುಷಿ ಸಾಹಿತಿ ದಿವಂಗತ ನಾಡೋಜ ಕಯ್ಯಾರ ಕಿಂಞಣ್ಣ ರೈಯವರ ಗೌರವಾರ್ಥ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯುವ ಸಭಾಂಗಣಕ್ಕೆ ಹೆಸರಿಡಲಾಗಿದೆ. ಎಂದಿನಂತೆ ಈ ಬಾರಿಯೂ ಆಳ್ವಾಸ್ ನುಡಿಸಿರಿ ಸಮ್ಮೇಳನವು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆ (ನುಡಿಸಿರಿ ವೇದಿಕೆ) ಯಲ್ಲಿ 4 ದಿನಗಳ ಕಾಲ ನೆರವೇರಲಿದೆ. ಇಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾಹಿತ್ಯ, ಸಂಸ್ಕೃತಿ, ಸಮಾಜ, ನೆಲ-ಜಲಗಳ ಕುರಿತು ಚಿಂತನ-ಮಂಥನ ನಡೆಯಲಿದೆ.

ಸಮ್ಮೇಳನದ ಪರಿಕಲ್ಪನೆ:
‘ಕರ್ನಾಟಕ : ಹೊಸತನದ ಹುಡುಕಾಟ’ ಈ ವರ್ಷದ ಆಳ್ವಾಸ್ ನುಡಿಸಿರಿಯ ಮುಖ್ಯ ಪರಿಕಲ್ಪನೆ. ಹೊಸತನದ ಹುಡುಕಾಟವು ಕನ್ನಡ ನಾಡಿನ ವಿವಿಧ ವಿಚಾರಗಳಲ್ಲಿ ಕ್ರಿಯಾತ್ಮಕವಾಗಿ ಮೂಡಿಬಂದ ಬಗೆಯನ್ನು ವಿವೇಚಿಸುವುದೆ ಈ ಶೀರ್ಷಿಕೆಯ ಮುಖ್ಯ ಉದ್ದೇಶ. ಈ ಪರಿಕಲ್ಪನೆಯ ಮೂಲಕ ಕಾಲದ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚುವ ಕೆಲಸವು ಇಲ್ಲಿ ನಡೆಯುವ ಚಿಂತನ-ಮಂಥನದಿಂದ ಸಾಧ್ಯವಾಗಬೇಕೆನ್ನುವುದು ಸಮ್ಮೇಳನದ ಮುಖ್ಯ ಉದ್ದೇಶ.

ಆಳ್ವಾಸ್ ನುಡಿಸಿರಿ ಉದ್ಘಾಟನೆಗೆ ಧಾರವಾಡದ ಡಾ.ವೀಣಾ ಶಾಂತೇಶ್ವರ:
ಕತೆಗಾರರಾಗಿ, ಕಾದಂಬರಿಗಾರರಾಗಿ, ಅನುವಾದಕರಾಗಿ, ಸಂಘಟಕರಾಗಿ ಉತ್ತಮ ಆಡಳಿತಗಾರರಾಗಿ ಹೆಸರುವಾಸಿಯಾದವರು ಡಾ.ವೀಣಾ ಇವರು. ಸ್ತ್ರೀ ಸಂವೇದನೆಯ ಬರಹಗಾರರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಇವರು ಚಿರಪರಿಚಿತರಾಗಿದ್ದಾರೆ.

[quote font_size=”14″ bgcolor=”#ffffff” arrow=”yes” align=”right”]ವಿಶೇಷ ಆಕರ್ಷಣೆ:
ನಾಡಿನ ವಿಶೇಷ ಸಾಂಸ್ಕೃತಿಕ ತಂಡಗಳಿಂದ ಅತ್ಯದ್ಭುತ ಸಾಂಸ್ಕೃತಿಕ ಮೆರವಣಿಗೆ.
ಕನ್ನಡ ದೇಸೀ ಹಾಡುಗಾರರ ತಂಡಗಳಿಂದ ಗೀಗೀ ಪದ, ಸೋಬಾನೆ ಹಾಡು, ಲಾವಣಿ, ಬುರ್ರ ಕಥಾ ದೇಸಿ ಹಾಡುಗಳ ಕಲರವ.
ದೇಶದ ಸಾಂಪ್ರದಾಯಿಕ ಬೀದಿ ಜಾದುಗಾರರ ಆಯ್ದ 15 ತಂಡಗಳಿಂದ ಬೀದಿ ಜಾದು ಪ್ರದರ್ಶನ.
ಬೆಳಗಾಂ ಜಿಲ್ಲೆ ಅಥಣಿ ತಾಲೂಕಿನ ಭಾರ ಎತ್ತುವ ವಿಶೇಷ ಸಾಮರ್ಥ್ಯದ ತಂಡಗಳಿಂದ ಅಪೂರ್ವ ಭಾರ ಎತ್ತುವ ಪ್ರದರ್ಶನ.
ನವಂಬರ್ 27ರಂದು ರಾತ್ರಿ 9 ರಿಂದ 10 ಗಂಟೆಯವರೆಗೆ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ರಘು ದೀಕ್ಷಿತ್ ಮತ್ತು ತಂಡದಿಂದ ಸಂಗೀತ ರಸಸಂಜೆ.[/quote]

ಐದು ಪ್ರಧಾನಗೋಷ್ಠಿಗಳು:
ಹೊಸತನದ ಹುಡುಕಾಟಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಮಾಧ್ಯಮ, ಶಿಕ್ಷಣ, ನೀರಿನ ಬಳಕೆ ಮತ್ತು ಹಂಚಿಕೆ ಎಂಬ ವಿಚಾರಗಳಲ್ಲಿ ಐದು ಗೋಷ್ಠಿಗಳು ಈ ಸಮ್ಮೇಳನದಲ್ಲಿ ಪ್ರಧಾನ ಚರ್ಚೆಗೊಳಗಾಗುತ್ತವೆ. ಹಳೆಗನ್ನಡ ಸಾಹಿತ್ಯ – ಡಾ.ಎನ್.ಎಸ್.ತಾರಾನಾಥ, ಮಧ್ಯಕಾಲೀನ ಕನ್ನಡ ಸಾಹಿತ್ಯ – ಡಾ.ಕೃಷ್ಣಮೂರ್ತಿ ಹನೂರು, ಏಕೀಕರಣ ಪೂರ್ವಸಾಹಿತ್ಯ-ಡಾ.ಜಿ.ಬಿ.ಹರೀಶ್, ಏಕೀಕರಣೋತ್ತರ ಸಾಹಿತ್ಯ – ವಸುಧೇಂದ್ರ, ಪ್ರತಿಕಾ ಮಾಧ್ಯಮ – ಪ್ರೊ ರವೀಂದ್ರ ರೇಷ್ಮೆ, ವಿದ್ಯುನ್ಮಾನ ಮಾಧ್ಯಮ – ಎನ್.ಎ.ಎಂ.ಇಸ್ಮಾಯಿಲ್, ಸಾಂವಿಧಾನಿಕ ಮೌಲ್ಯಗಳು – ಡಾ.ನಿರಂಜನಾರಾಧ್ಯ ವಿ.ಸಿ, ಕನ್ನಡ ಮಾಧ್ಯಮ – ಡಾ| ಎಂ.ಮೋಹನ ಆಳ್ವ, ಮಹಾದಾಯಿ ನದಿ – ವಿಕಾಸಸೊಪ್ಪಿನ ನರಗುಂದ, ಕಾವೇರಿ ನದಿ – ಡಾ.ಕೆ.ಸಿ.ಬಸವರಾಜ್ ಮತ್ತು ನೇತ್ರಾವತಿ ನದಿಯ ಕುರಿತು ದಿನೇಶ್ ಹೊಳ್ಳರವರು ತಮ್ಮ ಅನುಭವಗಳನ್ನು 35 ನಿಮಿಷಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ವಿಶೇಷೋಪನ್ಯಾಸಗಳು:
ಹೊಸತನದ ಹುಡುಕಾಟಕ್ಕೆ ಸಂಬಂಧಿಸಿದಂತೆ ಎಂಟು ಪ್ರಧಾನ ವಿಷಯಗಳಲ್ಲಿ ವಿಶೇಷೋಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ನ್ಯಾಯ – ಡಾ. ಬಿ. ನಿತ್ಯಾನಂದ ಶೆಟ್ಟಿ, ಗ್ರಾಮೀಣಾಭಿವೃದ್ಧಿ – ಡಾ. ಎಲ್. ಎಚ್. ಮಂಜುನಾಥ್, ಮಹಿಳಾ ಚಳವಳಿ – ಡಾ. ಗಾಯತ್ರಿ ನಾವಡ, ಸಾಮರಸ್ಯ – ಕುಂ. ವೀರಭದ್ರಪ್ಪ, ಜಾನಪದ – ಡಾ. ಬಸವರಾಜ ಕಲ್ಗುಡಿ, ಪರಿಸರ ಕಾಳಜಿ – ನಾಗೇಶ ಹೆಗಡೆ, ಕೃಷಿ – ವರ್ತೂರು ನಾರಾಯಣ ರೆಡ್ಡಿ ಮತ್ತು ಪ್ರದರ್ಶನ ಕಲೆಗಳ ಕುರಿತು ಮನೋರಮಾ ಬಿ. ಎಂ ರವರು ತಮ್ಮ ಜ್ಞಾನವನ್ನು 35 ನಿಮಿಷಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ಕವಿ ಸಮಯ- ಕವಿ ನಮನಗಳಲ್ಲಿ ಹತ್ತು ಕವಿಗಳು:
ಕವಿ ಸಮಯ- ಕವಿ ನಮನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಕವಿಯೂ ಕವಿತಾ ಪ್ರೇರಣೆಯ ಕುರಿತು ಮಾತನಾಡಿ ತಮ್ಮ ಕವಿತೆಯೊಂದನ್ನು ವಾಚಿಸುತ್ತಾರೆ. ತದನಂತರ ಸಂಗೀತ ಸಂಯೋಜನೆಗೊಳಗಾದ ಆ ಕವನವನ್ನು ಖ್ಯಾತ ಗಾಯಕರು ಹಾಡಲಿದ್ದಾರೆ. ಕವಿಗಳಾಗಿ ಡಾ. ಚಿಂತಾಮಣಿ ಕೊಡ್ಲಕೆರೆ, ವಿಜಯಲಕ್ಷ್ಮಿ ಶ್ಯಾನುಭೋಗ್, ಡಾ. ವಸಂತಕುಮಾರ್ ಪೆರ್ಲ, ಸುಕನ್ಯಾ ಕಳಸ, ಟಿ. ಯಲ್ಲಪ್ಪ, ಡಾ. ವಿಜಯಶ್ರೀ ಸಬರದ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಅರುಂಧತಿ ರಮೇಶ್, ಡಾ. ಸುಮತೀಂದ್ರ ನಾಡಿಗ ಮತ್ತು ಶ್ರೀನಿವಾಸ ಜೋಕಟ್ಟೆಯವರು ಭಾಗವಹಿಸುತ್ತಿದ್ದಾರೆ.

[quote font_size=”14″ bgcolor=”#ffffff” arrow=”yes” align=”right”]ಉದ್ಘಾಟನಾ ಸಮಾರಂಭದಲ್ಲಿ 500 ಗಣ್ಯರು ವೇದಿಕೆಯಲ್ಲಿ:
ಆಳ್ವಾಸ್ ನುಡಿಸಿರಿ ಸಮ್ಮೇಳನವು ಉದ್ಘಾಟನೆಗೊಳ್ಳುವ ಬೃಹತ್ ವೇದಿಕೆಯಲ್ಲಿ ನಾಡಿನ ಖ್ಯಾತನಾಮರು, ಸಾಹಿತಿಗಳು, ನುಡಿಸಿರಿ ಘಟಕದ ಪದಾಧಿಕಾರಿಗಳು ಸೇರಿ 500 ಮಂದಿ ಸಾಲಂಕೃತರಾಗಿ ವೇದಿಕೆಯಲ್ಲಿ ಆಸೀನರಾಗುವ ಅವಕಾಶ ಕಲ್ಪಿಸಲಾಗಿದೆ.[/quote]

ಖ್ಯಾತ ಸಾಹಿತಿಗಳ ಸಂಸ್ಮರಣೆ:
ನಮ್ಮನ್ನಗಲಿದ ಹಿರಿಯ ಸಾಹಿತಿಗಳನ್ನು ನೆನಪಿಸುವ, ಅವರ ಸಾಧನೆಗಳನ್ನು ಗೌರವಿಸುವ ಸಂಸ್ಮರಣಾ ಕಾರ್ಯಕ್ರಮದಲ್ಲಿ ಈ ಬಾರಿ ಮೂವರು ಹಿರಿಯರನ್ನು ಆಯ್ಕೆ ಮಾಡಲಾಗಿದೆ. ಖ್ಯಾತ ಕವಿಗಳಾದ ಕೆ. ಎಸ್. ನರಸಿಂಹಸ್ವಾಮಿಯವರನ್ನು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈಯವರನ್ನು ಪ್ರೊ. ಎಂ. ರಾಮಚಂದ್ರ ಹಾಗೂ ಹಿರಿಯ ಸಂಶೋಧಕರಾದ ನಾಡೋಜ ಡಾ. ಎಂ. ಎಂ. ಕಲಬುರ್ಗಿಯವರನ್ನು ಖ್ಯಾತ ಅಂಕಣಕಾರರಾದ ಪದ್ಮರಾಜ ದಂಡಾವತಿಯವರು ನೆನಪು ಮಾಡಿಕೊಡಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ:

ಕನ್ನಡ ನಾಡು ನುಡಿ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷ ಸಾಧನೆಗಳನ್ನು ಮಾಡಿದ ೧೦ ಮಂದಿ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ – ಸಾಹಿತ್ಯ, ಪ್ರವಚನ
ಡಾ.ಸುಮತೀಂದ್ರ ನಾಡಿಗ – ಸಾಹಿತ್ಯ
ಶ್ರೀ ಎಸ್.ವಿ.ರಾಜೇಂದ್ರ ಸಿಂಗ್ ಬಾಬು – ಚಲನಚಿತ್ರ
ವಿದ್ವಾನ್ ಶ್ರೀ ಆರ್.ಕೆ.ಪದ್ಮನಾಭ – ಶಾಸ್ತ್ರೀಯ ಸಂಗೀತ
ಡಾ.ಬಿ.ಎನ್.ಸುಮಿತ್ರಾ ಬಾಯಿ – ಸಾಹಿತ್ಯ
ಶ್ರೀ ಈಶ್ವರ ದೈತೋಟ – ಮಾಧ್ಯಮ
ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ – ಯಕ್ಷಗಾನ ಭಾಗವತಿಕೆ
ಶ್ರೀ ವರ್ತೂರು ನಾರಾಯಣ ರೆಡ್ಡಿ- ಕೃಷಿ
ಶ್ರೀ ಶಿಲ್ಪಿ ಹೊನ್ನಪ್ಪಚಾರ್ – ಶಿಲ್ಪಕಲೆ
ಶ್ರೀ ಸೈಯ್ಯದ್ ಸಲ್ಲಾವುದ್ದೀನ್ ಪಾಷಾ – ಸಂಸ್ಕೃತಿ ಸೇವೆ
ಎಂಟು ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು.
ರತ್ನಾಕರವರ್ಣಿ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆ, ಬಿ.ವಿ.ಕಾರಂತ ವೇದಿಕೆ, ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ, ಕೆ.ಎನ್.ಟೈಲರ್ ವೇದಿಕೆ, ಮಾ| ವಿಠಲ ಶೆಟ್ಟಿ ವೇದಿಕೆ ಮತ್ತು ಕು.ಶಿ.ಹರಿದಾಸ ಭಟ್ಟ ವೇದಿಕೆಗಳಲ್ಲಿ ಸಮ್ಮೇಳನದ ಮೂರು ದಿನಗಳ ಕಾಲವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಅಧ್ಯಕ್ಷರೊಂದಿಗೆ ಸಂವಾದ:
ಸಮ್ಮೇಳನದ 2 ದಿನಗಳು ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಸಂವಾದ ಕಾರ್ಯವನ್ನು ಏರ್ಪಡಿಸಲಾಗಿದೆ. ದಿನಾಂಕ 26ರಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರೊಂದಿಗೆ ಹಾಗೂ ದಿನಾಂಕ 29ರಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವರೊಂದಿಗೆ ಸಂವಾದ ಕಾರ‍್ಯವು ನಡೆಯಲಿದೆ.

[quote font_size=”14″ bgcolor=”#ffffff” arrow=”yes” align=”right”]ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ 700 ವಿಶೇಷ ಸಾಧಕರ ಆಯ್ಕೆ:
ಆಳ್ವಾಸ್ ನುಡಿಸಿರಿ 2015ರ ಸಮ್ಮೇಳನಕ್ಕೆ ಈ ಬಾರಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 700 ಕ್ಕಿಂತಲೂ ಅಧಿಕ ಸಾಧಕರನ್ನು ವಿಶೇಷ ಅಹ್ವಾನಿತರಾಗಿ ಆಮಂತ್ರಿಸಲಾಗಿದೆ. ಇವರೆಲ್ಲರೂ ನಾಲ್ಕು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನಕ್ಕೆ ಗೌರವವನ್ನು ತಂದುಕೊಡಲಿದ್ದಾರೆ.[/quote]

ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯ:
ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಶಿಕ್ಷಕ ಸಿಬ್ಬಂದಿಗಳಿಗೆ ಸಮ್ಮೇಳನದ ನಾಲ್ಕು ದಿನಗಳು ಭಾಗವಹಿಸುವಿಕೆಗೆ ಅನ್ವಯಿಸುವಂತೆ ಅನ್ಯಕಾರ್ಯ ನಿಮಿತ್ತ ರಜೆಯ ಸೌಲಭ್ಯವಿದೆ.

ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ-ಉಪಚಾರಗಳ ಸೌಲಭ್ಯ:
ಸಮ್ಮೇಳನದಲ್ಲಿ ಭಾಗವಹಿಸುವ ಯಾವುದೇ ವಿದ್ಯಾರ್ಥಿಗೆ ಸಂಪೂರ್ಣ ಉಚಿತವಾಗಿ ವಸತಿ ಮತ್ತು ಊಟೋಪಚಾರಗಳ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ಸಂಬಂಧಪಟ್ಟ ಶಿಕ್ಷಣಸಂಸ್ಥೆಯ ಗುರುತುಚೀಟಿಯೊಂದಿಗೆ ಹಾಜರಿರಬೇಕು.

ಪ್ರತಿನಿಧಿಗಳಿಗೆ 100 ರೂ. ಪ್ರತಿನಿಧಿ ಶುಲ್ಕ:
ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಆಗಮಿಸುವ ವಿದ್ಯಾರ್ಥಿಯೇತರರಿಂದ ೧೦೦ ರೂ. ಪ್ರತಿನಿಧಿ ಶುಲ್ಕವನ್ನು ಸ್ವೀಕರಿಸಲಾಗುತ್ತದೆ. ಎಲ್ಲಾ ಪ್ರತಿನಿಧಿಗಳಿಗೂ ನಾಲ್ಕು ದಿನಗಳ ವಸತಿ, ಊಟ-ಉಪಚಾರಗಳ ವ್ಯವಸ್ಥೆ ಮಾಡಲಾಗುತ್ತದೆ.

ಬಿಡುವಿಲ್ಲದ ಕಾರ‍್ಯಕ್ರಮಗಳು:
ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯುವ ಮೂರುದಿನಗಳು ಒಂದು ನಿಮಿಷವೂ ಬಿಡುವಿಲ್ಲದಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ಗಂಟೆ 8ರಿಂದ ಸಂಜೆ 6ವರೆಗೆ, ನಂತರ ಎಂಟು ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅವರವರ ಆಸಕ್ತಿಗನುಸಾರ ಆಯ್ದು ನೋಡಿ ಸಂತೋಷಪಡಲು ಅವಕಾಶವಿದೆ.

Exit mobile version