ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ ಸುರಭಿ ರಿ. ಬೈಂದೂರು ಇದರ ಬೆಳ್ಳಿಹಬ್ಬದ ಸಂಭ್ರಮಾಚರಣೆ – ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 29 ಜನವರಿಯಿಂದ ಆರಂಭಗೊಳ್ಳಲಿದ್ದು, ಫೆಬ್ರವರಿ 02ರ ತನಕ 5 ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ 06:30ರಿಂದ ಅದ್ದೂರಿಯಾಗಿ ನಡೆಯಲಿದೆ.
ಸುರಭಿ ಜೈಸಿರಿಗೆ ಚಾಲನೆ:
ಜನವರಿ 29ರ ಬುಧವಾರ ಸುರಭಿ ಜೈಸಿರಿಗೆ ಚಾಲನೆ ದೊರೆಯಲಿದ್ದು. ಸಚಿವರಾದ ಮಂಕಾಳ ವೈದ್ಯ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ್ ಆಳ್ವ ಅವರು ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಶುಭಶಂಸನೆಗೈಲಿದ್ದಾರೆ. ಈ ವೇಳೆ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಅಂದು ಸುರಭಿಯ ಹಿರಿಯ ಹಿನ್ನೆಲೆ ಕಲಾವಿದ ಚಂದ್ರ ಬಂಕೇಶ್ವರ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ. ಬಳಿಕ ಸುರಭಿ ನೃತ್ಯ ಕಲಾವಿದರಿಂದ ನೃತ್ಯ ವೈವಿಧ್ಯ ಪ್ರದರ್ಶನ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳಿಂದ ಕುಂಚ ಸಂಭ್ರಮ ಜರುಗಲಿದೆ.
ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ:
ಜನವರಿ 30ರ ಗುರುವಾರ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಚಂದನ ವಾಹಿನಿಯ ʼಥಟ್ ಅಂತ ಹೇಳಿʼ ರಸಪ್ರಶ್ನೆ ಕಾರ್ಯಕ್ರಮದ ನಿರೂಪಕ, ವೈದ್ಯ, ಲೇಖಕ ಡಾ. ನಾ. ಸೋಮೇಶ್ವರ ಅವರಿಗೆ 11ನೇ ಬಿಂದುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸಂಸದರಾದ ಬಿ.ವೈ. ರಾಘವೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಶುಭಶಂಸನೆಗೈಯಲಿದ್ದಾರೆ. ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಅಧ್ಯಕ್ಷತೆ ವಹಿಸಲಿದ್ದು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಆಶಯ ನುಡಿಗಳನ್ನಾಡಲಿದ್ದಾರೆ. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಭಿನಂದನಾ ನುಡಿಗಳನ್ನಾಡಲಿದ್ದು, ನಿವೃತ್ತ ಬ್ಯಾಂಕ್ ಅಧಿಕಾರಿ ಎಚ್. ವಸಂತ ಹೆಗ್ಡೆ ದಿನದ ನುಡಿಗಳನ್ನಾಡಲಿದ್ದಾರೆ. ಅಂದು ಉದ್ಯಮಿ ಜಯಾನಂದ ಹೋಬಳಿದಾರ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ. ಈ ವೇಳೆ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಬಳಿಕ ಸುರಭಿ ವಿದ್ಯಾರ್ಥಿಗಳಿಂದ ನೃತ್ಯ ನೃತ್ಯಾಂಕುರ ಭರತನಾಟ್ಯ ಹಾಗೂ ದಶಾವತಾರ ನೃತ್ಯ ರೂಪಕ ನಡೆಯಲಿದೆ.
ಜನವರಿ 31ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಆನಂದ ಸಿ. ಕುಂದರ್ ಅವರು ವಹಿಸಿಕೊಳ್ಳಲಿದ್ದು, ಸಹಕಾರಿ ಧುರೀಣ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಶುಭಶಂಸನೆಗೈಯಲಿದ್ದಾರೆ. ಅಂದು ಸುರಭಿಯ ಹಿರಿಯ ಹಿನ್ನೆಲೆ ಕಲಾವಿದ ಗೋಪಾಲಕೃಷ್ಣ ಜೋಷಿ ಅವರಿಗೆ ಗೌರವಾರ್ಪಣೆ ನಡೆಯಿದೆ. ಬಳಿಕ ಸುರಭಿ ವಿದ್ಯಾರ್ಥಿಗಳಿಂದ ಯಕ್ಷ ನೃತ್ಯ ಮತ್ತು ʼಭಕ್ತ ಸುಧನ್ವʼ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಫೆಬ್ರವರಿ 01ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ವಹಿಸಿಕೊಳ್ಳಲಿದ್ದು, ಹಿರಿಯ ಹೃದ್ರೋಗ ತಜ್ಞ ಡಾ. ಪ್ರಭಾಕರ ಹೆಚ್ ಅವರು ಆಶಯ ನುಡಿಗಳನ್ನು, ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷರಾದ ಡಾ. ಉಮೇಶ್ ಪುತ್ರನ್ ಅವರು ಶುಭಶಂಸನೆಯನ್ನು ಮಾಡಲಿದ್ದಾರೆ. ಈ ವೇಳೆ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಅಂದು ಸುರಭಿ ಸದಸ್ಯರಿಂದ ಹಾಗೂ ವಿದ್ಯಾರ್ಥಿ ಪೋಷಕರಿಂದ ಶ್ವೇತ ಕುಮಾರ ಯಕ್ಷಗಾನ, ಸುರಭಿ ಸಂಗೀತ ವಿದ್ಯಾರ್ಥಿಗಳಿಂದ ನಾದ ಗಾನಾಮೃತಂ ಹಾಗೂ ಸುರಭಿ ಪ್ರಾಕ್ತನ ವಿದ್ಯಾರ್ಥಿಗಳಿಂದ ʼಗಾನ ನಾಟ್ಯ ವೈವಿಧ್ಯʼ ಜರುಗಲಿದೆ.
ಫೆಬ್ರವರಿ 02ರ ಭಾನುವಾರ ನಡೆಯುವ ಸುರಭಿ ಜೈಸಿರಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅವರು ವಹಿಸಿಕೊಳ್ಳಲಿದ್ದಾರೆ. ಉದ್ಯಮಿಗಳಾದ ಕೃಷ್ಣಮೂರ್ತಿ ಮಂಜರು ಆಶಯ ನುಡಿಗಳನ್ನಾಡಲಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಶುಭಶಂಸನೆಗೈಯಲಿದ್ದಾರೆ. ಈ ವೇಳೆ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಅಂದು ಸುರಭಿಯ ಹಿನ್ನೆಲೆ ಕಲಾವಿದರಾದ ಉಮೇಶ್ ಮೇಶ್ ಶಿರೂರು, ಪೂರ್ಣಿಮಾ ಗುರುರಾಜ್ ಆಚಾರ್ಯ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ರಂಗ ಸುರಭಿ ವಿದ್ಯಾರ್ಥಿಗಳಿಂದ ಕುಂದಾಪ್ರ ಕನ್ನಡದ ಮಕ್ಕಳ ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದೆ.
ಸುರಭಿ ಜೈಸಿರಿಯಲ್ಲಿ ಪ್ರತಿವರ್ಷದಂತೆ ಗುರುವಂದನೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಜರುಗಲಿದೆ. ಕಳೆದ 25 ವರ್ಷಗಳಿಂದ ಸಂಸ್ಥೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, ವಿಶೇಷ ಗುರುತಿಸುವಿಕೆ ಮೊದಲಾದ ಕಾರ್ಯಕ್ರಮಗಳು 5 ದಿನಗಳಲ್ಲಿಯೂ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಹಾಗೂ ನಿರ್ದೇಶಕ ಸುಧಾಕರ ಪಿ. ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

