ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರಕಾರಿ ಶಾಲೆಗಳ ಉಳಿವಿನಲ್ಲಿ ಶಿಕ್ಷಕರು, ಎಸ್.ಡಿ.ಎಂ.ಸಿ ಹಾಗೂ ಹಳೆವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ಇಲ್ಲಿ ಕಲಿತ ವಿದ್ಯಾರ್ಥಿಗಳು ಯಾವುದೇ ಸ್ಥಾನದಲ್ಲಿದ್ದರೂ ಅಭಿಮಾನದಿಂದ ಶಾಲೆಯತ್ತ ಮತ್ತೆ ಹಿಂದಿರುಗಿ ನೋಡಿದರೆ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಬೇಕಿಲ್ಲ. ಅಂತಹ ವಾತಾವರಣವನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಹೇಳಿದರು.
ಅವರು ಇಲ್ಲಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಸ್ವಯಂಸ್ಪೂರ್ತಿ ಫೌಂಡೇಶನ್ ರಿ. ಬೆಂಗಳೂರು ವತಿಯಿಂದ ಕೊಡುಗೆಯಾಗಿ ನೀಡಿದ ಟೇಬಲ್ ಕುರ್ಚಿ ಸಹಿತ ನಾಲ್ಕು ಕಂಪ್ಯೂಟರ್ ಸೆಟ್, ಬುಕ್ ರ್ಯಾಕ್ ಹಾಗೂ ಆಟದ ಸಾಮಾಗ್ರಿಗಳನ್ನು ಒಳಗೊಂಡ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಲೋಪಾರ್ಪಣೆಗೊಳಿಸಿ ಮಾತನಾಡಿ, ಶಾಲೆ ಹಾಗೂ ದೇವಸ್ಥಾನದ ಆವರಣದಲ್ಲಿ ಅಭಿಮಾನ ಹಾಗೂ ಭಕ್ತಿ ಮಾತ್ರವೇ ಪ್ರಧಾನವಾಗಿರಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಆಲೋಚನಾ ಕ್ರಮವನ್ನು ರೂಪಿಸುವ ಶಕ್ತಿ ಸರಕಾರಿ ಶಾಲೆಗಳಲ್ಲಿದೆ ಎಂದರು.

ಸ್ವಯಂಸ್ಪೂರ್ತಿ ಫೌಂಡೇಶನ್ ಸಂಸ್ಥಾಪಕ ಸಿ.ಎಸ್. ನಾಗರಾಜ ಶೆಟ್ಟಿ ಜಡ್ಕಲ್ ಅವರು ಮಾತನಾಡಿ, ಸಂಸ್ಥೆಯ ಮೂಲಕ ಸರಕಾರಿ ಶಾಲೆಗಳು ಹಾಗೂ ಅಂಗನವಾಡಿ ಸೇರಿ ಈತನಕ ಒಟ್ಟು 22 ಶಾಲೆಗಳಿಗೆ ದೇಣಿಗೆ ನೀಡಲಾಗಿದೆ. ಶಾಸಕರ 300 ಟ್ರೀಸ್ ಪರಿಕಲ್ಪನೆಯ ಜೊತೆಗೆ ಸರಕಾರಿ ಶಾಲೆಯ ಮೇಲಿನ ಅಭಿಮಾನವಿರಿಸಿ ಜೊತೆಯಾಗುವ ಶಿಕ್ಷಕರು ಹಾಗೂ ಹಳೆವಿದ್ಯಾರ್ಥಿಗಳ ಕಾಳಜಿಯೇ ಈ ಸೇವಾ ಕಾರ್ಯದಲ್ಲಿ ಮುಂದುವರಿಯಲು ಪ್ರೇರಣೆ ನೀಡಿದೆ ಎಂದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್, ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಪ್ರಭಾಕರ ಗಾಣಿಗ, ಪತ್ರಕರ್ತ ಸುನಿಲ್ ಹೆಚ್ ಜಿ, ಅಣ್ಣಪ್ಪ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ವತಿಯಿಂದ ನಾಗರಾಜ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಲೆಗೆ ಮೊದಲ ಭಾರಿಗೆ ಭೇಟಿ ನೀಡಿದ ಶಾಸಕರಾದ ಗುರುರಾಜ ಗಂಟಿಹೊಳೆ ಅವರನ್ನು ಗೌರವಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಸಹಶಿಕ್ಷಕಿಯರಾದ ಮಾಲತಿ ಸ್ವಾಗತಿಸಿ, ಸಂಗೀತಾ ವಂದಿಸಿದರು. ಮುಖ್ಯ ಶಿಕ್ಷಕಿ ಮುಕ್ತಾ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿಯಾದ ಸಾರಿಕಾ ವಂದಿಸಿದರು. ವಿದ್ಯಾರ್ಥಿಗಳನ್ನು ಚಪ್ಪಾಳೆ ಗೀತೆಯ ಮೂಲಕ ಅತಿಥಿಗಳನ್ನು ಸ್ವಾಗತಿಸಿಕೊಂಡದ್ದು ಗಮನ ಸೆಳೆಯಿತು.