Site icon Kundapra.com ಕುಂದಾಪ್ರ ಡಾಟ್ ಕಾಂ

ಬಂಟ್ವಾಡಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ

oplus_0

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಬಂಟ್ವಾಡಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಾಗಿ ಬಂದ ಹಾದಿ ಅದ್ಭುತ. ಗ್ರಾಮೀಣ ಪ್ರದೇಶದಲ್ಲಿ ಶಾಲೆಯನ್ನು ಪ್ರಾರಂಭಿಸಿದ ಈ ಭಾಗದ ಹಿರಿಯರ ಶ್ರಮ ಸಾರ್ಥಕವಾದಂತಿದೆ. ಅಧ್ಯಾಪಕ ವೃತ್ತಿ ನಡೆಸಲು ನಾಚಿಕೆ ಪಡುತ್ತಿದ್ದ ಅಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾಲ್ವರು ಶಿಕ್ಷಕರು ಪ್ರಾತ: ಸ್ಮರಣೀಯರು. ದಾನಿಗಳ, ಹಳೆ ವಿದ್ಯಾರ್ಥಿಗಳ ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆ ಅದ್ಭುತವಾಗಿ ಬೆಳೆದು ನಿಂತಿದೆ. ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿರುವ ಈ ಶಾಲೆಯನ್ನು ಬೆಳೆಸಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಹೇಳಿದರು.

ಸೇನಾಪುರ ಗ್ರಾಮದ ಬಂಟ್ವಾಡಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಮೃತ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಶ್ಯಾನುಭಾಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ, ಪ್ರಸಿದ್ಧ ವಾಗ್ಮಿ, ನಟ ಓಂ ಗಣೇಶ ಉಪ್ಪುಂದ, ಶಾಲೆಯ ಸಂಚಾಲಕ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ಅರುಣ್ ಕುಮಾರ್ ಶೆಟ್ಟಿ, ವಂಡ್ಸೆ ನಾಡ ಕಛೇರಿಯ ಉಪ ತಹಶೀಲ್ದಾರ್ ಶೈಲಜಾ ಎಸ್.ಹೆಗ್ಡೆ, ತಾಪಂ ಮಾಜಿ ಸದಸ್ಯ ಪ್ರಭು ಕೆನಡಿ ಪಿರೇರಾ ಶುಭ ಹಾರೈಸಿದರು.

ಇದೇ ಸಂದರ್ಭ ಶಾಲೆಯ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 75 ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಭಿನಂದನ ಎ.ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ವಿಶೇಷ ಸಾಧಕ ಹಳೆ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಾರಾಯಣ ಶೆಟ್ಟಿ, ಕೆ.ಜಯಪ್ರಕಾಶ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ಮೊಗವೀರ ಉಪಸ್ಥಿತರಿದ್ದರು.

ಅರುಣ್ ಹಕ್ಲಾಡಿ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ ಶ್ಯಾನುಭಾಗ್ ಶಾಲೆ ನಡೆದು ಬಂದ ಹಾದಿ, ಇತಿಹಾಸದ ಬಗ್ಗೆ ಮೆಲುಕು ಹಾಕಿದರು. ಪ್ರಮೋದಾ ವರದಿ ವಾಚಿಸಿದರು. ಚಂದ್ರಶೇಖರ ಶೆಟ್ಟಿ ಬಂಟ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಂಭು ಗುಡ್ಡಮ್ಮಾಡಿ ವಂದಿಸಿದರು.

Exit mobile version