Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಮಹಾಭಿಯಾನ

oplus_0

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ಇದರ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿರುವ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಮಹಾಭಿಯಾನ ಗಂಗೊಳ್ಳಿಯ ಸಮುದ್ರ ಕಿನಾರೆಯಲ್ಲಿ ಭಾನುವಾರ ನಡೆಯಿತು.

ಸಮುದ್ರಕ್ಕೆ ಕ್ಷೀರಾರ್ಘ್ಯ ಸಲ್ಲಿಸಿ ಪ್ರಾರ್ಥಿಸಿದ ಬಳಿಕ ಏಕಕಾಲದಲ್ಲಿ 108 ಜನರ ಗುಂಪುಗಳಿಂದ ಗಂಗೊಳ್ಳಿಯ ಮಲ್ಯರಬೆಟ್ಟು, ಖಾರ್ವಿಕೇರಿ ಹಾಗೂ ಲೈಟ್‌ಹೌಸ್ ಸಮೀಪ ಸಮುದ್ರ ಕಿನಾರೆಯ ಮೂರು ಸ್ಥಳಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಲಾಯಿತು. ಸಂಜೆ 4 ಗಂಟೆಯಿಂದ ನಿರಂತರವಾಗಿ 7 ಬಾರಿ ಶ್ರೀ ವಿಷ್ಣು ಸಹಸ್ರನಾಮ ಪಠಿಸಲಾಯಿತು.

ಈ ಸಂದರ್ಭ ಮಾತನಾಡಿದ ಉಮಾನಾಥ ದೇವಾಡಿಗ, ವಿಷ್ಣುತತ್ತ್ವ ವಿಶ್ವವ್ಯಾಪಿ. ವಿಶ್ವದ ಆಗುಹೋಗುಗಳ ಮೇಲೆ ಇದರ ಪ್ರಭಾವವಿದೆ. ವಿಶ್ವದುದ್ದಗಲಕ್ಕೂ ಸಮಷ್ಟಿಯ ಒಳಿತಿಗಾಗಿ ವಿಷ್ಣು ಸಹಸ್ರನಾಮ ಪಠಿಸುವ ಪರಿಪಾಠವಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಸಾಧ್ಯವೆಂಬುದನ್ನು ಪ್ರಯೋಗಗಳ ಮೂಲಕ ದೃಢಪಟ್ಟಿದೆ. ಸಮುದ್ರೋತ್ಪಾತ, ಪ್ರಕೃತಿ ವಿಕೋಪ, ರಾಷ್ಟ್ರ ಕ್ಷೋಭೆ ಮುಂತಾದ ವಿಕೃತಿಯನ್ನು ಆಧ್ಯಾತ್ಮದ ಹಿನ್ನಲೆಯಲ್ಲಿ ತಡೆಯುವುದು. ವ್ಯಕ್ತಿಗತ ಹಾಗೂ ಸಾಮೂಹಿಕ ಸಂಕಷ್ಟ ನಿವಾರಣೆ ಹಾಗೂ ಇಷ್ಟಾರ್ಥ ಪ್ರಾಪ್ತಿಗಾಗಿ ಹಾಗೂ ಕಡಲ್ಕೊರೆತ ಹಾಗೂ ಕಡಲಿನಿಂದ ಆಗಬಹುದಾದ ತೊಂದರೆಗಳನ್ನು ಮತ್ತು ಇತರ ಸಮಸ್ಯೆಗಳನ್ನು ತಡೆಗಟ್ಟುವುದಕ್ಕಾಗಿ ಮತ್ತೊಮ್ಮೆ ವಿಷ್ಣು ಸಹಸ್ರನಾಮ ಪಠಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಮುಖರಾದ ಡಾ. ಕಾಶೀನಾಥ ಪೈ, ಜಿ. ರೋಹಿದಾಸ ನಾಯಕ್, ನಾಗಪ್ಪಯ್ಯ ಪಟೇಲ್, ಜಿ. ಪಾಂಡುರಂಗ ಮಡಿವಾಳ, ಸವಿತಾ ಯು. ದೇವಾಡಿಗ, ಅಶ್ವಿತಾ ಜಿ.ಪೈ, ಸತೀಶ ಖಾರ್ವಿ ಎಂ., ವಿವಿಧ ಮಹಿಳಾ ಮಂಡಳಿಗಳ ಸದಸ್ಯರು, ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಸದಸ್ಯರು, ಮಾತೆಯರು, ಮೊದಲಾದವರು ಉಪಸ್ಥಿತರಿದ್ದರು.

Exit mobile version