Kundapra.com ಕುಂದಾಪ್ರ ಡಾಟ್ ಕಾಂ

ಹೊಸತನದ ಹುಡುಕಾಟ ಹೊಸದಲ್ಲ, ನಿರಂತರವಾದುದು: ಡಾ. ವೀಣಾ ಶಾಂತೇಶ್ವರ

ಮೂಡುಬಿದಿರೆ: ಸಾಹಿತ್ಯ-ಸಂಗೀತ ಇತರ ಲಲಿತ ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ಪರಿಷ್ಕರಿಸಿ, ಅತನಲ್ಲಿನ ದುಷ್ಟಶಕ್ತಿಗಳನ್ನು ನಾಶಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸಿ ಅವನನ್ನು ದೈವತ್ವದೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ಎಲ್ಲೆಡೆ ತಾಂಡವವಾಡುತ್ತಿರುವ ಅಶಾಂತಿ, ಅಸಹನೆ, ಅಸಹಿಷ್ಣುತೆ ಇತ್ಯಾದಿ ಅನಿಷ್ಟಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಲು ಅವಶ್ಯವಿರುವ ಮಾನಸಿಕ ಸ್ಥೈರ್ಯ ಪಡೆಯಲು ಇವೇ ಪೂರಕವಾದುದು. ಈ ನಿಟ್ಟಿನಲ್ಲಿಯೂ ನುಡಿಸಿರಿಯಂತಹ ಕಾರ್ಯಕ್ರಮಗಳು ಮುಖ್ಯವೆನಿಸುತ್ತದೆ ಎಂದು ಸಾಹಿತಿ ಡಾ. ವೀಣಾ ಶಾಂತೇಶ್ವರ ಹೇಳಿದರು.

ಅವರು ಮೂಡುಬಿದಿರೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೫ ಉದ್ಘಾಟಿಸಿ ಮಾತನಾಡಿದರು.

ಹೊಸದಕ್ಕಾಗಿ ಹುಡಕಾಟ ಮನುಷ್ಯನ ಮೂಲಭೂತ ಸ್ವಭಾವ. ಸಾಹಿತ್ಯದಲ್ಲಷ್ಟೇ ಅಲ್ಲದೇ ವಿಜ್ಞಾನ-ಕೃಷಿ-ಕೈಗಾರಿಕೆ-ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ಎಲ್ಲಾ ಕಾಲಗಳಲ್ಲಿಯೂ ಕ್ರಿಯಾಶೀಲ ಮನಸ್ಸುಗಳು ಹೊಸತನಕ್ಕಾಗಿ, ಭಿನ್ನತೆಗಾಗಿ, ಅನನ್ಯತೆಗಾಗಿ, ಅಸ್ಮಿತೆಗಾಗಿ, ಹುಡುಕಾಟ ನಡೆಸಿಯೇ ಇರುತ್ತವೆ. ಸಾಹಿತ್ಯದೊಳಗಂತೂ ‘ಹಳೆಯಸಾಹಿತ್ಯ’, ‘ಆಧುನಿಕ ಸಾಹಿತ್ಯ’ ಅಂತನ್ನುವುದು ವಿಶ್ಲೇಷಣೆಯ ಅನುಕೂಲಕ್ಕಾಗಿ ನಾವು ಕೊಟ್ಟಿರುವ ಕಾಲಸೂಚಕ ವಿಶೇಷಣಗಳಷ್ಟೇ. ಪ್ರತಿಯೊಂದು ಕಾಲಘಟ್ಟದ ಶ್ರೇಷ್ಠ ಸಾಹಿತ್ಯವೂ ಆ ಕಾಲದ ಯುಗಧರ್ಮವನ್ನು, ಹೊಸತನವನ್ನು ಪ್ರತಿಪಾದಿಸುತ್ತದೆ ಮತ್ತು ಆ ಮೂಲಕ ಸಾರ್ವಕಾಲಿಕ ಸತ್ಯಗಳನ್ನೂ ಮೌಲ್ಯಗಳನ್ನೂ ಪ್ರತಿಪಾದಿಸುತ್ತದೆ. ನಾವು ಇವತ್ತಿನ ಸಾಹಿತ್ಯದಲ್ಲಿ ಉದಾರೀಕರಣ-ಸ್ವಾತಂತ್ರ್ಯ-ಸಮಾನತೆ ಇತ್ಯಾದಿ ಮೌಲ್ಯಗಳ ಅನ್ವೇಷಣೆ ಹೊಸದು ಅನ್ನುತ್ತೇವೆ. ಆದರೆ ಗುರುನಾನಕ ಮತ್ತು ಸಂತ ಕಬೀರದಾಸರ ಸಾಹಿತ್ಯದಲ್ಲಿಯೂ ನಾವು ಇದನ್ನೇ ಕಾಣುತ್ತೇವೆ. ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ ಅವರ ಬರವಣಿಗೆ ಯಲ್ಲೂ ಇದನ್ನೇ ಕಾಣುತ್ತೇವೆ. ಒಂದು ಶ್ರೇಷ್ಠ ಸಾಹಿತ್ಯಕೃತಿ ತನ್ನ ಕಾಲದಲ್ಲಿ ಯಾವತ್ತೂ ಹೊಸತನದ ಹುಡುಕಾಟವೇ ಆಗಿರುತ್ತದೆ. ವಿಮರ್ಶೆಯಲ್ಲೂ ಅಷ್ಟೇ. ಕೃತಿ ಹಳೆಯದೇ ಆಗಿದ್ದರೂ ವಿಮರ್ಶಕರ ದೃಷ್ಟಿಕೋನ ಹಾಗೂ ಮಾನದಂಡಗಳು ಬದಲಾಗುತ್ತ ಸಾಗುತ್ತವೆ. ಆ ಮೂಲಕ ಹೊಸ-ಹೊಸ ಒಳನೋಟಗಳನ್ನು ನೀಡುತ್ತ ಸಾಗುತ್ತದೆ ಎಂದವರು ಹೇಳಿದರು.

ಶಿಕ್ಷಣದಲ್ಲಿ ಹೊಸತನದ ಹುಡುಕಾಟ
ಸಾಹಿತ್ಯದಂತೆ ಶಿಕ್ಷಣಕ್ಷೇತ್ರದಲ್ಲಿಯೂ ಈಗ ಅನೇಕ ಹೊಸ ಪ್ರಯೋಗಗಳಾಗುತ್ತಿವೆ. ಆದರೆ ಸಮಕಾಲೀನ ಅವಶ್ಯಕತೆಗಳನ್ನು ಪೂರೈಸುವ, ಸವಾಲುಗಳನ್ನು ಎದುರಿಸುವ, ಹಾಗೂ ಗಟ್ಟಿ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ಯಶಸ್ವೀ ಶಿಕ್ಷಣಪದ್ಧತಿಯನ್ನು ನಾವಿನ್ನೂ ಹುಡುಕಿಕೊಳ್ಳಬೇಕಾಗಿದೆ. ಸದ್ಯ ಪಠ್ಯಕ್ರಮವನ್ನು ತಜ್ಞರು ರೂಪಿಸುವ ವಿಧಾನ, ಪಠ್ಯಪುಸ್ತಕಗಳ ಆಯ್ಕೆ, ಪ್ರವೇಶಾತಿ, ಪರೀಕ್ಷಾ ಮೌಲ್ಯಮಾಪನ- ಇತ್ಯಾದಿ ಶಿಕ್ಷಣದ ಎಲ್ಲಾ ಮಹತ್ವದ ಪ್ರಕ್ರಿಯೆಗಳಲ್ಲಿಯೂ ನಮ್ಮಲ್ಲಿ ಭ್ರಷ್ಟಾಚಾರ ಮತ್ತು ರಾಜಕೀಯ ಇವುಗಳೇ ಒಳಸೇರಿ ಹದಗೆಡಿಸುತ್ತಿವೆ. ದೂರದೃಷ್ಟಿ, ವಿದ್ವತ್ತು, ಮತ್ತು ಉದಾರ ದೃಷ್ಟಿಕೋನ ಹೊಂದಿದ ಶಿಕ್ಷಣತಜ್ಞರನ್ನು ಆಯ್ದು, ಒಂದು ಮಾದರಿ ಶಿಕ್ಷಣನೀತಿಯನ್ನು ರೂಪಿಸುವ ಹೊಣೆಯನ್ನು ಅವರಿಗೆ ವಹಿಸಿಕೊಡುವ ಕೆಲಸವನ್ನು ನಮ್ಮ ಸರಕಾರ ಮಾಡಬೇಕಾಗಿದೆ ಎಚಿದರು.

ಹೆಣ್ಣಿನ ಮೇಲಿನ ದೌರ್ಜನ್ಯ ನಿಂತಿಲ್ಲ
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಇಂದು ಹೆಚ್ಚುತ್ತಲೇ ಇದೆ. ದೆಹಲಿಯಲ್ಲಿ ನಿರ್ಭಯಾ ಪ್ರಕರಣ ಬಳಿಕ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಹೋಗಿವೆ. ಇವತ್ತು ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ- ಅತ್ಯಾಚಾರಗಳ ಭರಾಟೆ ನೋಡಿದಾಗ ನನಗೆ ದಿಗ್ಭ್ರಮೆಯಾಗುತ್ತದೆ.
ಅತ್ಯಾಚಾರ ವಿಷಯದ ಕಾನೂನನ್ನು ಕಠಿಣಗೊಳಿಸಿ ಕ್ಷಿಪ್ರವಾಗಿ ಶಿಕ್ಷೆ ಜಾರಿ ಮಾಡುವುದು. ಅತ್ಯಾಚಾರದ ಅಪರಾಧ ಎಸಗಿದವನು ಯಾರೇ ಆಗಿರಲಿ, ಯಾವ ಧರ್ಮ, ಜಾತಿಯವನೇ ಆಗಿರಲಿ, ಪ್ರಭಾವೀ ರಾಜಕಾರಣಿಯಾಗಿರಲಿ, ಅಧಿಕಾರಿಯಾಗಿರಲಿ, ಸ್ವಾಮೀಜಿಯೇ ಆಗಿರಲಿ, ಸಾಮಾನ್ಯನೇ ಆಗಿರಲಿ, ಅಪರಾಧ ಸಾಬೀತಾದ ತಕ್ಷಣ ಅತ್ಯಂತ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಇನ್ನೊಂದು- ನಮ್ಮ ಶಿಕ್ಷಣಪದ್ಧತಿಯಲ್ಲಿ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ವಿಧಾನಗಳನ್ನು ಅಳವಡಿಸಬೇಕು. ನಮ್ಮ ಭಾರತೀಯ ಸಂಸ್ಕೃತಿಗೆ ತಕ್ಕ ಹಾಗೆ ಹೆಣ್ಣುಮಕ್ಕಳನ್ನು ಗೌರವಿಸುವ, ವ್ಯಕ್ತಿಸ್ವಾತಂತ್ರ್ಯವನ್ನು ಮನ್ನಿಸುವ ಮನೋಭಾವವನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳಲ್ಲಿ ಬೆಳೆಸಬೇಕು. ನಮ್ಮ ಪರಂಪರಾಗತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ಅತ್ಯಾಚಾರ, ಮರ್ಯಾದಾಹತ್ಯೆ ಇತ್ಯಾದಿ ದೌರ್ಜನ್ಯಗಳನ್ನು ಹತ್ತಿಕ್ಕಲು ಸಾಧ್ಯ. ಮುಖ್ಯವಾಗಿ ಇಂಥವೆಲ್ಲಾ ಸಾಧ್ಯವಾಗಲು ನಮಗೆ ಏಕರೂಪ ನಾಗರಿಕ ಸಂಹಿತೆಯೂ ಅವಶ್ಯವಾಗಿ ಬೇಕು ಅನ್ನುವುದನ್ನು ನಾವು ಮರೆಯಬಾರದು ಎಂದರು.

ಸಮ್ಮೇಳನಾಧ್ಯಕ್ಷ ಡಾ. ಓ. ವಿ. ವೆಂಕಟಾಚಲ ಶಾಸ್ತ್ರೀ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ನಾಡೋಜ ಡಾ. ಹಂಪ ನಾಗರಾಜಯ್ಯ ಹಾಗೂ ಕಮಲಾ ಹಂಪನಾ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ, ನುಡಿಸಿರಿಯ ಎಲ್ಲಾ ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಸಮಾರಂಭವನ್ನು ಉದ್ಘಾಟಿಸಿದ ಡಾ. ವೀಣಾ ಶಾಂತೇಶ್ವರ್ ಹಾಗೂ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರನ್ನು ಗೌರವಿಸಲಾಯಿತು. ಆಳ್ವಾಸ್ ನುಡಿಸಿರಿ ೨೦೧೪ ‘ಕರ್ನಾಟಕ ವರ್ತಮಾನದ ತಲ್ಲಣಗಳು’ ನೆನಪಿನ ಸಂಚಿಕೆ ನಾವರಣಗೊಂಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸ್ವಾಗತಿಸಿ ಪ್ರಸ್ತಾವನೆಗೈದುರು. ಪತ್ರಕರ್ತ ಮನೋಹರ ಪ್ರಸಾದ್ ವಂದಿಸಿದರು.

Exit mobile version